ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ಜನರು ಆತಂಕ ಪಡಬೇಡಿ. ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಅವರು, ರಮನಹಳ್ಳಿ ಹಣ್ಣಿನ ವ್ಯಾಪಾರಿಗೆ ತಗುಲಿದ ಕೊರೊನಾ ಸಮುದಾಯಕ್ಕೆ ಹರಡಿಲ್ಲ. ಆರೋಗ್ಯ ಇಲಾಖೆ ತಜ್ಞರು ಇದನ್ನು ಸಮುದಾಯಕ್ಕೆ ಹರಡುವಿಕೆ ಆಗಿದ್ಯಾ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಚರ್ಚೆ ಮಾಡಿ ಹೇಳುತ್ತಾರೆ ಎಂದರು.
ಮೈಸೂರಿನಲ್ಲಿ ಕೊರೊನಾದಿಂದ ಯಾರೂ ಗಂಭೀರ ಸ್ಥಿತಿಗೆ ಹೋಗಿಲ್ಲ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಜಿಲ್ಲೆಯಲ್ಲಿ 23 ವೆಂಟಿಲೇಟರ್ ಇದೆ. ವೆಂಟಿಲೇಟರ್ ಅಗತ್ಯ ಉಂಟಾಗಿಲ್ಲ.
ಮಂಡಕಳ್ಳಿ ವಿಮಾನ ನಿಲ್ದಾಣದ ಹಿಂಭಾಗ ಕೆಎಸ್ಒಯು ಕಟ್ಟಡ ಇದೆ. ಅದನ್ನು ಕೂಡ ಕೋವಿಡ್-19 ಆಸ್ಪತ್ರೆಗೆ ಬಳಸಿಕೊಳ್ಳಲಾಗುವುದು ಎಂದರು. ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನದಿಂದ ಬರುತ್ತಿರುವ ಜನರಿಂದ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೊರ ರಾಜ್ಯದಿಂದ ಮೈಸೂರಿಗೆ ಬರುವ ಜನರ ಮೇಲೆ ಸಾಕಷ್ಟು ನಿಗಾ ಇಡಲಾಗಿದೆ ಎಂದು ಹೇಳಿದರು.
ಕೃಷ್ಣವಿಲಾಸ ರಸ್ತೆಯನ್ನು ಸೀಲ್ ಡೌನ್ ಮಾಡಿರುವುದರಿಂದ ಅಲ್ಲಿರುವ ಅವಿಲಾಶ್ ಕಾನ್ವೆಂಟ್ನಲ್ಲಿ ಪರೀಕ್ಷೆ ಮಾಡಲು ಆಗುವುದಿಲ್ಲ. ಇಲ್ಲಿನ ಪರೀಕ್ಷಾ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ. ವಿದ್ಯಾರ್ಥಿಗಳು ಭಯ ಪಡುವ ಅಗತ್ಯವಿಲ್ಲ ಎಂದರು.