ಮೈಸೂರು: ಕಳೆದ 15 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ ದಾಟಿದೆ. ಸೋಂಕಿತರು ಹೆಚ್ಚಾಗಿ ಹಳ್ಳಿ ಪ್ರದೇಶದಲ್ಲೇ ಇರುವುದು ಆತಂಕಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿ 2ನೇ ಹಂತದ ಕೊರೊನಾ ಸೋಂಕು ನಗರ ಪ್ರದೇಶವಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ಹೆಚ್ಚಾಗಿ ಹರಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಎಚ್.ಡಿ.ಕೋಟೆ, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿದೆ. ಸ್ವತಃ ಸ್ಥಳೀಯ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಜೊತೆಗೆ ತಾಲೂಕಿನ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಫಲಿತಾಂಶ ನೆಗೆಟಿವ್ ಬಂದಿದೆ.
ಕೆ.ಆರ್.ನಗರ ತಾಲೂಕಿನ ತಹಶೀಲ್ದಾರ್‌ಗೆ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಶಾಸಕ ಸಾ.ರಾ.ಮಹೇಶ್ ಅವರ ಗನ್ ಮ್ಯಾನ್ ಹಾಗೂ ತಾಲೂಕಿನ ಅಧಿಕಾರಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಬೆಂಗಳೂರು, ಮಹಾರಾಷ್ಟ್ರ, ತಮಿಳುನಾಡು ಕಡೆಯಿಂದ ತಮ್ಮ ತಮ್ಮ ಗ್ರಾಮಗಳಿಗೆ ಬಂದ ವ್ಯಕ್ತಿಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡುತ್ತಿದೆ. ಇದರಿಂದ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 481 ಮಂದಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ 268 ಮಂದಿ ಗುಣಮುಖರಾಗಿದ್ದು, 200 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 8 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚು ವಯಸ್ಸಿನವರು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಐಸೊಲೇಷನ್ ಮಾಡಲು ಚಿಂತನೆ ನಡೆಸಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.