ಮೈಸೂರು : ತಿ.ನರಸೀಪುರ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಾಲೂಕಿಗೆ ದೌಡಾಯಿಸಿದರು.
ಸಾರ್ವಜನಿಕ ಆಸ್ಪತ್ರೆ, ಕೂಡ್ಲೂರು ಕೋವಿಡ್ ಕೇರ್ ಸೆಂಟರ್, ಕಂಟೇನ್ಮೆಂಟ್ ಜೋನ್ಗಳಿಗೆ ಭೇಟಿ ನೀಡಿ, ಕೊರೊನಾ ಸೋಂಕಿತರ ಹೆಚ್ಚಳವಾಗುತ್ತಿರುವ ಕಾರಣ ಹಾಗೂ ತಡೆಗಟ್ಟಲು ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಡಿಸಿ ರೋಹಿಣಿ ಸಿಂಧೂರಿ ಮಾತನಾಡಿ, ಇಡೀ ದೇಶದಲ್ಲಿ ನಮ್ಮ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವ್ಯಾಕ್ಸಿನೇಷನ್ ಆಗಿದೆ. ವ್ಯಾಕ್ಸಿನೇಷನ್ ಹೆಚ್ಚಾಗಿ ಪಡೆದುಕೊಂಡರೆ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಎಲ್ಲಾ ತಾಲೂಕುಗಳಲ್ಲಿ ಶೇ.70 ರಿಂದ ಶೇ.80 ವ್ಯಾಕ್ಸಿನೇಷನ್ ಆಗಿದೆ ಎಂದರು.
ಕಂಟೇನ್ಮೆಂಟ್ ಜೋನ್ಗಳನ್ನ ಹೆಚ್ಚಾಗಿ ಮಾಡಬೇಕು. ತಾಲೂಕು ಆಡಳಿತವನ್ನ ಬಲಿಷ್ಠಗೊಳಿಸಲು ಭೇಟಿ ನೀಡಿದ್ದೇನೆ. ಹೋಬಳಿ ಮಟ್ಟಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನ ತೆರೆಯಿರಿ.
ಸ್ಯಾನಿಟೈಸ್ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. 5 ರಿಂದ 10ಕ್ಕೂ ಹೆಚ್ಚು ಕೇಸ್ಗಳು ಬಂದರೆ ಗಾರ್ಮೆಂಟ್ಸ್ಗಳನ್ನು ಮುಚ್ಚುತ್ತೇವೆ ಎಂದು ತಿಳಿಸಿದರು.
ಬಳಿಕ ಎಸ್‌ಪಿ ಸಿ ಬಿ ರಿಷ್ಯಂತ್ ಮಾತನಾಡಿ, ಕಂಟೇನ್ಮೆಂಟ್ ಜೋನ್ಗಳಲ್ಲಿ ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಕಾನೂನು ಉಲ್ಲಂಘನೆ ಮಾಡಿ ಓಡಾಟ ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೇವೆ ಎಂದರು.
ಕೊಡಗಹಳ್ಳಿ ಗ್ರಾಮವನ್ನ ಮೈಕ್ರೋ ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ. 150 ಬೈಕ್ಗಳನ್ನ ಸೀಜ್ ಮಾಡಲಾಗಿದೆ. 250 ಮಾಸ್ಕ್ ಫೈನ್ ಹಾಕಲಾಗಿದೆ. ಇಷ್ಟೆಲ್ಲಾ ಫೈನ್ ಹಾಕುತ್ತಿರುವುದು ಜನರಿಗೆ ತೊಂದರೆ ನೀಡುವ ದೃಷ್ಟಿಯಿಂದಲ್ಲ. ಜನರಿಗೆ ಜವಾಬ್ದಾರಿ ಬರಲಿ ಎಂಬ ಉದ್ದೇಶದಿಂದ ಮಾಡಲಾಗಿದೆ ಎಂದು ಹೇಳಿದರು.
ನಂಜನಗೂಡು ಮಾದರಿಯಲ್ಲೇ ಕೊಡಗಹಳ್ಳಿ ಗ್ರಾಮವನ್ನ ಕಂಪ್ಲೀಟ್ ಸೀಲ್ಡೌನ್ ಮಾಡಿದ್ದೇವೆ. ಅಗತ್ಯ ವಸ್ತುಗಳನ್ನ ಸ್ಥಳೀಯವಾಗಿ ಖರೀದಿ ಮಾಡಬೇಕು. ಇನ್ನಾದರೂ ಜನತೆ ಎಚ್ಚೆತ್ತು ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.