ಮೈಸೂರು: ಕೊರೊನಾ ವೈರಸ್ ಬಗ್ಗೆ ಅನೇಕರು ತಮ್ಮದೇಯಾದ ಶೈಲಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಂತೆಯೇ ಅಂತಾರಾಷ್ಟ್ರೀಯ ವಯೋಲಿನ್ ವಾದಕ ಮೈಸೂರು ಮಂಜುನಾಥ್ ಅವರು ತಮ್ಮ ವಾದನದ ಮೂಲಕ ಕೊರೊನಾ ಬಗ್ಗೆ ಸಂದೇಶ ಸಾರಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ನಟ-ನಟಿಯರು, ಹಾಡುಗಾರರು, ಸಾಧಕರ ಮೂಲಕ ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸಿದೆ. ಅದೇ ರೀತಿ ಏನಾದರು ವಿಷಯ ಇಟ್ಟುಕೊಂಡು ವಿಶೇಷವಾಗಿ ಜಾಗೃತಿ ಮೂಡಿಸುವಂತೆ ವಯೋಲಿನ್ ವಾದಕ ಮೈಸೂರು ಮಂಜುನಾಥ್ ಅವರನ್ನು ಸರ್ಕಾರ ಕೇಳಿಕೊಂಡ ಹಿನ್ನೆಲೆ ಈ ರೀತಿಯ ವಿನೂತನ ಜಾಗೃತಿ ಮೂಡಿಸಿದ್ದಾರೆ.
ಶಾಸ್ತ್ರೀಯ ಸಂಗೀತದಲ್ಲಿ ಪ್ರಮುಖ ಸ್ವರವಾದ ಅಮೃತವರ್ಷಿಣಿ ಸ್ವರದಲ್ಲಿ ವಯೋಲಿನ್ ವಾದನ ಆರಂಭಿಸಿದ ಮೈಸೂರು ಮಂಜುನಾಥ್, ಅಂತ್ಯದಲ್ಲಿ ಕರ್ಕಸ ಸ್ವರ ನುಡಿಸಿ ಅಂತ್ಯಗೊಳಿಸಿದ್ದಾರೆ. ಇಂಪಾಗಿರುವ ಸಂಗೀತದಲ್ಲಿ ಅಪಸ್ವರ ಬಂದಾಗ ಸಂಗೀತ ಪ್ರೇಮಿಗಳಿಗೆ ಅಸಹ್ಯವಾಗುತ್ತದೆ. ಅದೇ ರೀತಿ ಸುಂದರ ಸಮಾಜದಲ್ಲಿ ಅನಾರೋಗ್ಯ ಉಂಟಾದಾಗ ಹಾನಿಯಾಗುತ್ತದೆ. ಸಂಗೀತದಲ್ಲಿ ಅಪಸ್ವರ ಉಂಟಾದರೆ ಸರಿಪಡಿಸಬಹುದು. ಆದ್ರೆ, ಕೊರೊನಾ ಸಂದರ್ಭದಲ್ಲಿ ಸ್ವಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಅನವಶ್ಯಕವಾಗಿ ಮನೆಯಿಂದ ಹೊರ ಬರೋದು, ಮೈಮೇಲೆ ಅಪಾಯ ಎಳೆದುಕೊಂಡಂತೆ ಎನ್ನುತ್ತಾರೆ ಮಂಜುನಾಥ್.
ಮೈಸೂರು ಮಂಜುನಾಥ್ ಅವರು ಕೊರೊನಾ ಬಗ್ಗೆ ಮೂಡಿಸಿದ ಈ ವಯೋಲಿನ್ ಸಂಗೀತವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿನ ಫೇಸ್‌ಬುಕ್ ಖಾತೆಯಲ್ಲೂ ಹಾಕಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿಲು ಭಾರತ, ಅಮೆರಿಕಾ, ಬ್ರೇಜಿಲ್, ಜರ್ಮನಿ ಸೇರಿದಂತೆ ಅಂತಾರಾಷ್ಟ್ರೀಯ ಸಂಗೀತಗಾರರಿಂದ ಹಾಡೊಂದು ಬಿಡುಗಡೆಯಾಗಲಿದೆ. ಈ ಸಂಗೀತಗಾರರಲ್ಲಿ ಮೈಸೂರು ಮಂಜುನಾಥ್ರ ವಯೋಲಿನ್ ವಾದನವೂ ಒಂದು.
ಈಟಿವಿ ಭಾರತದೊಂದಿಗೆ ಮಾತನಾಡಿದ ಮೈಸೂರು ಮಂಜುನಾಥ್, ರಾಜ್ಯ ಸರ್ಕಾರ ಕಳೆದ ಹತ್ತು ದಿನಗಳಿಂದ ವಿನೂತನವಾಗಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಯೋಲಿನ್ ಮೂಲಕ ಈ ಪ್ರಯತ್ನ ನಡೆಸಿದ್ದೇನೆ. ಜನರು ಸರ್ಕಾರ ನೀಡುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೈ ಜೋಡಿಸಿದರೆ ಶ್ರಮ ಸಾರ್ಥಕವಾಗುತ್ತದೆ ಎಂದರು.