ಮೈಸೂರು : ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಗಾರೆ ಕೆಲಸ ಮಾಡಿಕೊಂಡು ಓದಿರುವ ಮಹದೇವಸ್ವಾಮಿ ಎಂಬ ವಿದ್ಯಾರ್ಥಿ 14 ಚಿನ್ನದ ಪದಕ ಪಡೆದ್ರೆ, ಇನ್ನೂ ತಂದೆ-ತಾಯಿ ಇಬ್ಬರೂ ಇಲ್ಲದ ವಿದ್ಯಾರ್ಥಿನಿ ತೇಜಸ್ವಿನಿ ಎಂಬುವರು ಪದವಿಯಲ್ಲಿ 9 ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಗಾರೆ ಕೆಲಸ ಮಾಡಿ 14 ಚಿನ್ನದ ಪದಕ ಪಡೆದ ವಿದ್ಯಾರ್ಥಿ : ಚಾಮರಾಜನಗರ ಜಿಲ್ಲೆಯ ನಾಗವಳ್ಳಿ ಗ್ರಾಮದ ಮಹದೇವಸ್ವಾಮಿ ಅವರು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ 14 ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಬಡತನದಲ್ಲಿ ಬೆಳೆದ ಇವರು 20 ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ.
ನಂತರ ತಾಯಿ ಕೂಲಿ ಕೆಲಸ ಮಾಡಿ ಇವರನ್ನು ಓದಿಸಿದ್ದಾರೆ. ಪದವಿಯಲ್ಲಿಯೂ 2 ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಐಎಎಸ್ ಹಾಗೂ ಕೆಎಎಸ್ ಮಾಡಬೇಕು ಎಂಬ ಆಸೆ ಇವರದ್ದಾಗಿದೆ. ಚಿನ್ನದ ಪದಕ ಹಾಗೂ ನಗದು ಬಹುಮಾನವನ್ನು ತಂದೆ-ತಾಯಿ ಹಾಗೂ ನನ್ನ ಜೀವನ ರೂಪಿಸಿದ ಶಿಕ್ಷಕರಿಗೆ ಅರ್ಪಿಸುತ್ತೇನೆ ಎಂದರು.
ತಂದೆ-ತಾಯಿ ಇಲ್ಲದೆ ಓದಿ 9 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ತೇಜಸ್ವಿನಿ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಓದಿ, ಬಿಎ ಪದವಿಯಲ್ಲಿ 9 ಚಿನ್ನದ ಪದಕ ಹಾಗೂ 10 ನಗದು ಬಹುಮಾನವನ್ನು ಪಡೆದಿದ್ದಾರೆ.
ಇವರು ತಮ್ಮ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದು, ಆ ನೋವನ್ನು ತಂದೆ ನೀಗಿಸಿದ್ದಾರೆ. ಆದರೆ, ಇವರು ಪಿಯುಸಿ ಓದುವಾಗ ತಂದೆಯನ್ನೂ ಸಹ ಕಳೆದುಕೊಂಡಿದ್ದಾರೆ. ತಂದೆ-ತಾಯಿ ಇಲ್ಲದೆ ಕಷ್ಟದಲ್ಲಿಯೂ ಸಹ ಓದಿ ವಿಶೇಷ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು ವಿವಿ ಘಟಿಕೋತ್ಸವ : ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ