ಮೈಸೂರು: ಇಲ್ಲಿನ ಮೈಸೂರು-ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಹತ್ತಿರ ನಿರ್ಮಾಣವಾಗಿದ್ದ ಗುಂಬಜ್ ಮಾದರಿಯ ಬಸ್ ತಂಗುದಾಣ ಬಿಜೆಪಿ ಸಂಸದ ಹಾಗೂ ಶಾಸಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ತೀವ್ರ ವಾಗ್ವಾದದ ಬಳಿಕ ಪಕ್ಷದ ಮುಖಂಡರು ಕರೆದು ಸಂಧಾನ ಮಾಡಿಸಿದ ಬಳಿಕ ಇಡೀ ವಿವಾದ ಸುಖಾಂತ್ಯ ಕಂಡಿತು.
ವಿವಾದದ ಹಿನ್ನೆಲೆ: ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್ಎ ರಾಮದಾಸ್ ನಡುವೆ ಗುಂಬಜ್ ಗಲಾಟೆ ಜೋರಾಗಿತ್ತು. ತಂಗುದಾಣದ ಮೇಲ್ಭಾಗ ಮಸೀದಿಯ ಮೇಲಿರುವ ಗೋಪುರಗಳ ಮಾದರಿಯಲ್ಲಿ ನಿರ್ಮಾಣವಾಗಿತ್ತು. ಇದು ಪಕ್ಷದ ಉಭಯ ನಾಯಕರ ಮಧ್ಯೆ ಮಾತಿನ ಸಮರಕ್ಕೆ ಕಾರಣವಾಗಿತ್ತು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ ಮೂರು ಗೋಪುಗಳಿರುವುದು ಮಸೀದಿಯೇ. ಅದು ಸಾರ್ವಜನಿಕ ನಿಲ್ದಾಣದ ಮೇಲೆ ಕಟ್ಟುವುದು ಸಲ್ಲದು. ಕಟ್ಟಿದವರು ಅದನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ನಾನೇ ಒಡೆದು ಹಾಕುತ್ತೇನೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕ ರಾಮದಾಸ್, ಇದು ಅರಮನೆ ಮಾದರಿಯ ಗೋಪುರ. ಇದಕ್ಕೆ ಧರ್ಮ ಲೇಪನ ಮಾಡಬಾರದು ಎಂದು ಸ್ಪಷ್ಟೀಕರಣ ನೀಡಿದ್ದರು. ಬಳಿಕ ಗೋಪುರಕ್ಕೆ ಬಳದಿದ್ದ ಚಿನ್ನದ ಬಣ್ಣವನ್ನು ಬದಲಿಸಿ ಕೆಂಪು ಬಣ್ಣ ಕೊಡಲಾಯಿತು. ಬಳಿಕ ಗೋಪುರಕ್ಕೆ ಕಳಶವನ್ನು ಅಳವಡಿಸಲಾಯಿತು. ಇಷ್ಟಕ್ಕೆ ನಿಲ್ಲದೇ ಇಬ್ಬರ ಮಧ್ಯೆ ತೀವ್ರ ವಾಗ್ದಾಳಿ ನಡೆದಿತ್ತು.
ಮಧ್ಯಪ್ರವೇಶಿಸಿದ ಪಕ್ಷದ ನಾಯಕತ್ವ: ಪಕ್ಷದ ಶಾಸಕ- ಸಂಸದ ಕಿತ್ತಾಟ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿತ್ತು. ಇದನ್ನು ಮನಗಂಡ ಪಕ್ಷದ ಸಂಘಟನೆಯ ಮುಖಂಡರು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ಅವರನ್ನು ಕರೆಸಿ ಸಂಧಾನ ನಡೆಸಿ, ಸಮಸ್ಯೆ ಬಗೆಹರಿಸಿದೆ. ಇಬ್ಬರೂ ಪರಸ್ಪರ ವಿರುದ್ದ ಹೇಳಿಕೆ ನೀಡದಂತೆ ನಾಯಕರು ಇಬ್ಬರನ್ನೂ ಮನವೊಲಿಸಿದ ಬಳಿಕ ಉಭಯ ನಾಯಕರು ಸಂಧಾನಕ್ಕೆ ಒಪ್ಪಿದರು.
ಬಳಿಕ ಬಸ್ ನಿಲ್ದಾಣದ ಮೇಲಿದ್ದ 3 ಗೋಪುರಗಳಲ್ಲಿ 2 ಸಣ್ಣ ಗೋಪುರಗಳನ್ನು ತೆರವುಗೊಳಿಸಿ, ಅರಮನೆ ಮಾದರಿಯ ಬಸ್ ನಿಲ್ದಾಣವೆಂದು ಶಾಸಕ ರಾಮದಾಸ್ ಸ್ಪಷ್ಟೀಕರಣ ನೀಡಿ ವಿವಾದಕ್ಕೆ ತೆರೆ ಎಳೆದರು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದರು.
ಓದಿ: ವಿವಾದಿತ ಬಸ್ ತಂಗುದಾಣದ ಮೇಲಿನ ಎರಡು ಗೋಪುರ ತೆರವು: ಎಸ್ ಎ ರಾಮದಾಸ್