ಮೈಸೂರು : ಮೇಯರ್ ಆಯ್ಕೆ ವಿಚಾರದಲ್ಲಿ ಶಾಸಕ ತನ್ವೀರ್‌ಸೇಠ್ ನಿವಾಸದ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದ ಸಂಬಂಧ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಕುರಿತ ವಿಚಾರಣೆಗಾಗಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಜೀಜ್ ಸೇಠ್, ಅಬ್ದುಲ್ ಖಾದರ್ ಶಾಹಿದ್, ನನಗೆ ದುರುದ್ದೇಶದಿಂದ ಪಕ್ಷದಿಂದ ನೋಟಿಸ್ ನೀಡಲಾಗಿದೆ. ನಾನು ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಿಲ್ಲ. ಆವತ್ತು ಘೋಷಣೆ ಕೂಗುತ್ತಿದ್ದವರನ್ನ ನಾನು ತಡೆದಿದ್ದೇನೆ. ಇಲ್ಲಿ ಒಬ್ಬ ನಾಯಕನನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದರು.
ವ್ಯವಸ್ಥಿತವಾಗಿ ತನ್ವೀರ್ ಸೇಠ್ ಅವರನ್ನ ಮೂಲೆಗುಂಪು ಮಾಡುವ ಉದ್ದೇಶದಿಂದ ನಮ್ಮನ್ನ ಟಾರ್ಗೆಟ್ ಮಾಡಲಾಗಿದೆ. ರಾಜ್ಯದ ನಾಯಕರು ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಯಾರು ಇದನ್ನ ಮಾಡ್ತಿದ್ದಾರೆ ಅಂತಾ ಕೆಪಿಸಿಸಿ ಅಧ್ಯಕ್ಷರು ತನಿಖೆ ಮಾಡಿಸಲಿ ಎಂದರು.
ತನ್ವೀರ್ ಸೇಠ್ ಹಾಗೂ ಅವರ ಬೆಂಬಲಿಗರಿಗೆ ಮಾತ್ರ ಯಾಕೇ ನೋಟಿಸ್ ಜಾರಿ ಆಗಿದೆ. ಪಾಲಿಕೆಯಲ್ಲಿ ಕುಳಿತು ತನ್ವೀರ್ ವಿರುದ್ಧ ಮಾತನಾಡಿದವರಿಗೂ ನೋಟಿಸ್ ಜಾರಿಯಾಗಬೇಕು ಅಲ್ಲವೇ? ದ್ರುವನಾರಾಯಣ್ ಸುದ್ದಿಗೋಷ್ಠಿ ಮಾಡಬೇಡಿ ಎಂದರೂ ಮಾಡಿದ್ದಾರೆ, ಅವರ ಮೇಲೆ ಯಾಕೆ ಕ್ರಮ ಇಲ್ಲ ಎಂದು ಪ್ರಶ್ನಿಸಿದರು.
ತನ್ವೀರ್ ಅವರಿಗೆ ಕಾಂಗ್ರೆಸ್‌ನಲ್ಲೇ ವಿರೋಧಿಗಳಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷಿಗಳಿವೆ. ಚುನಾವಣೆ ಸಂದರ್ಭದಲ್ಲಿ ಅವರ ಸೋಲಿಗೆ ಕಾಂಗ್ರೆಸ್‌ನವರೇ ಪ್ರಯತ್ನಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಓದಿದ್ದು ಅಲ್ಪ.. ವಂಚನೆಯಲ್ಲಿ ಪಿಹೆಚ್ಡಿ.. ಎಫ್ಬಿ ನಕಲಿ ಪ್ರೊಫೈಲ್ ಮೂಲಕ ಲಕ್ಷಾಂತರ ರೂ. ಕಬಳಿಸಿದ ಕಿಲಾಡಿ ಲೇಡಿ