ಮೈಸೂರು: ಕೇಂದ್ರ ಸರ್ಕಾರಕ್ಕೆ ಒಂದು ದಿನಕ್ಕೆ ಪೆಟ್ರೋಲಿಯಂ ಉತ್ಪನ್ನಗಳಿಂದ ಒಂದು ಸಾವಿರ ಕೋಟಿಗೂ ಹೆಚ್ಚು ಆದಾಯ ಬರುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಹೆಚ್ಚಾಗುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬಹಳ ಕಡಮೆ ಇದ್ದರೂ ಭಾರತದಲ್ಲಿ ಪೆಟ್ರೋಲ್ ಬೆಲೆ 100 ರೂ. ಆಗುವ ಕಡೆ ಹೋಗುತ್ತಿದೆ. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕಿದ್ದು, ಪ್ರತಿದಿನ ಪೆಟ್ರೋಲಿಯಂ ಉತ್ಪನ್ನಗಳಿಂದ ಕೇಂದ್ರ ಸರ್ಕಾರಕ್ಕೆ ಸಾವಿರ ಕೋಟಿ ಆದಾಯ ಬರುತ್ತದೆ. ಜನರನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಜನರು ಬಾಯಿ ಬಿಡುತ್ತಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಕೇಂದ್ರ ಸರ್ಕಾರ ಈ ರೀತಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಬಜೆಟ್ ಚುನಾವಣೆಯ ಬಜೆಟ್ ಆಗಿದೆ. ಕೆಲವು ರಾಜ್ಯಗಳಿಗೆ ಮಾತ್ರ ಬಜೆಟ್ ಹೆಚ್ಚಿನ ಪಾಲು ಸಿಕ್ಕಿದೆ. ನಮ್ಮ ರಾಜ್ಯದಿಂದ 25 ಜನ ಎಂಪಿಗಳನ್ನು ಕಳಿಸಿದ್ದರೂ ಅವರು ಏನೂ ಕೆಲಸ ಮಾಡಿಲ್ಲ. ಕೃಷಿ ಸೆಸ್ ಸರಿಯಿಲ್ಲ. ಇದು ಸಾಲದ ಬಜೆಟ್ ಆಗಿದೆ. ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ನಿರುದ್ಯೋಗ ಹೆಚ್ಚಿಸುವ ಬಜೆಟ್ ಇದಾಗಿದೆ ಎಂದು ಲಕ್ಷ್ಮಣ್ ದೂರಿದರು.