ಮೈಸೂರು: ಗ್ಯಾರಂಟಿ ಯೋಜನೆಗಳ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಆರೋಪಿಸಿ, ರಾಜ್ಯ ಸರ್ಕಾರದ ವಿರುದ್ಧ ನಗರ ಹಾಗೂ ಗ್ರಾಮಾಂತರ ಬಿಜೆಪಿ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
''ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಗ್ಯಾರಂಟಿಗಳನ್ನು ಜಾರಿಗೊಳಿಸಲು ಒದ್ದಾಡುತ್ತಿದೆ. ಯೋಜನೆಗಳ ಜಾರಿಯಲ್ಲಿ ಹಲವು ಗೊಂದಲಗಳಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್ ದರ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಅನ್ನಭಾಗ್ಯಕ್ಕೆ ಅಕ್ಕಿ ಹೊಂದಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. 200 ಯೂನಿಟ್ ಉಚಿತ ಎಂದು ಹೇಳಿ ಇದೀಗ ಷರತ್ತು ವಿಧಿಸಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಸುಳ್ಳುರಾಮಯ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ'' ಎಂದು ಶಾಸಕ ಟಿ. ಎಸ್. ಶ್ರೀವತ್ಸ ಕಿಡಿಕಾರಿದರು.
''ಕೇಂದ್ರ ಸರ್ಕಾರದ ವಿರುದ್ಧ ಅಕ್ಕಿ ಕೊಡುತ್ತಿಲ್ಲವೆಂದು ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದು, ನಾವೂ ಸಹ ರಾಜ್ಯ ಸರ್ಕಾರ ಗ್ಯಾರಂಟಿಗಳ ಗೊಂದಲದ ಕುರಿತು ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ನವರು ಕೇಂದ್ರದ ಅನುಮತಿ ಕೇಳಿ ಗ್ಯಾರಂಟಿ ಕೊಟ್ಟಿದ್ದಾರಾ. ಹೇಳದೇ, ಕೇಳದೇ ಭರವಸೆಗಳನ್ನು ಕೊಟ್ಟು, ಈಗ ಆ ಭರವಸೆಗಳನ್ನು ಕೊಡಲಾಗದೇ ಕೇಂದ್ರದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ'' ಎಂದು ಕಿಡಿಕಾರಿದರು.
''ಕೇಂದ್ರ ಸರ್ಕಾರ ಜನಪರ ಕೆಲಸಗಳಲ್ಲಿ ರಾಜಕಾರಣ ಮಾಡುವುದಿಲ್ಲ. ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟರೂ ಉಳಿದ ಐದು ಕೆಜಿ ಅಕ್ಕಿ ಹೊಂದಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಗ್ಯಾರಂಟಿಗಳನ್ನು ಜಾರಿ ಮಾಡಲಾಗದೇ ಅದನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಿಂದ ಪ್ರತಿದಿನ ಒಂದಲ್ಲ ಒಂದು ಸಮಸ್ಯೆ ಆಗುತ್ತಿದೆ. ಗೃಹಜ್ಯೋತಿ ಯೋಜನೆಯೂ ಸರಿಯಾಗಿ ಜಾರಿಯಾಗಿಲ್ಲ. ಪದವೀಧರ ನಿರುದ್ಯೋಗಿ ಯುವಕ, ಯುವತಿಯರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ, ''ಗ್ಯಾರಂಟಿ ಯೋಜನೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಬ್ಬರು ಬಸ್ಸಿನಿಂದ ಬಿದ್ದು ಸತ್ತಿದ್ದಾರೆ. ರಾಜ್ಯದ ಮಾನ ದೇಶದೆಲ್ಲೆಡೆ ಹರಾಜಾಗುತ್ತಿದೆ. ಟೊಳ್ಳು ಭರವಸೆಗಳನ್ನು ನಂಬಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ ಜನರಿಗೆ ಭ್ರಮನಿರಸನವಾಗಿದೆ. ಕಾಂಗ್ರೆಸ್‌ಗೆ ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ, ಜನರ ಮುಂದೆ ತಪ್ಪಾಯಿತೆಂದು ಒಪ್ಪಿಕೊಳ್ಳಲಿ. ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಪೂರ್ಣವಾಗಿ ಜಾರಿಗೊಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ'' ಎಂದು ಎಚ್ಚರಿಸಿದರು.
ಅಕ್ಕಿ ನೀಡುವಂತೆ ಒತ್ತಾಯಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ''ಕೇಂದ್ರ ಸರ್ಕಾರ ಕರ್ನಾಟಕದ ಬಡ ಜನತೆಗೆ ನೀಡಬೇಕಾಗಿರುವ ಅನ್ನವನ್ನು ಕಸಿದುಕೊಂಡು ಅಕ್ಕಿ ಕದನ ಆರಂಭಿಸಿರುವ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ'' ಎಂದು ಆರೋಪಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ''10 ಕೆಜಿ ವಿತರಿಸುವ ಗ್ಯಾರಂಟಿ ಯೋಜನೆ ಪ್ರಕಟಿಸಿದ ಮರು ದಿನವೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಹೊರತುಪಡಿಸಿ ಅಕ್ಕಿ, ಗೋಧಿ ಸರಬರಾಜು ಮಾಡಲಾಗುತ್ತಿಲ್ಲ ಎಂದು ಆದೇಶ ಹೊರಡಿಸಿದೆ. ಇದು ರಾಜ್ಯದ ಮೇಲಿನ ದ್ವೇಷ ರಾಜಕಾರಣಕ್ಕೆ ನಿರ್ದಶನ'' ಎಂದರು. ''ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ತೊಂದರೆ ಕೊಡುತ್ತಿದೆ. ಆದರೆ, ಗ್ಯಾರಂಟಿ ಅನುಷ್ಠಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಕ್ಕಿ ಸಹಿತವಾಗಿ ಎಲ್ಲ ಗ್ಯಾರಂಟಿಗಳನ್ನು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕರ್ನಾಟಕ ಮತ್ತು ಕನ್ನಡಿಗರ ಮೇಲಿನ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸುತ್ತೇನೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ''5 ಗ್ಯಾರಂಟಿಗಳ ಬಗ್ಗೆ ಜನ ಸಾಮಾನ್ಯರ ಬಗ್ಗೆ ಅಭಿಪ್ರಾಯ ಆಲಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಭ್ರಮವನ್ನು ನೋಡಬೇಕು. ಈ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತಡೆದುಕೊಳ್ಳಲು ಆಗದೇ ಮೈಮೇಲೆ ಚೇಳು ಬಿಟ್ಟುಕೊಟ್ಟವರಂತೆ ಒದ್ದಾಡುತ್ತಿದ್ದಾರೆ'' ಎಂದು ಕುಟುಕಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ. ಜೆ. ವಿಜಯ್‌ಕುಮಾರ್ ಮಾತನಾಡಿದರು.
ಇದನ್ನೂ ಓದಿ: Guarantee scheme: ಗೃಹಜ್ಯೋತಿಗೆ ಸರ್ವರ್ ಕಂಟಕ.. ಸೇವಾಸಿಂಧು ಪೋರ್ಟಲ್ ವಿರುದ್ಧ ಜನ ಗರಂ