ಮೈಸೂರು : ಟಿಪ್ಪು ಜಯಂತಿ ರೀತಿಯಲ್ಲೇ ಮಹಿಷ ದಸರಾವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯಾದ್ಯಂತ ಮಾಡಲು ಹೊರಟಿದೆ. ಮಹಿಷ ದಸರಾದ ಹಿಂದೆ ಸರ್ಕಾರದ ಕೈವಾಡವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.
ಪ್ರತಿ ವರ್ಷ ನವರಾತ್ರಿಯ ಪ್ರಯುಕ್ತ ಚಾಮುಂಡಿ ಬೆಟ್ಟವನ್ನು ಮೆಟ್ಟಲುಗಳ ಮೂಲಕ ಹತ್ತಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುವಂತೆ ಈ ವರ್ಷವೂ ದರ್ಶನ ಪಡೆಯಲು ಬಂದ ಸಚಿವೆ, ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯಲ್ಲಿ ಮಹಿಷ ದಸರಾವನ್ನು ಇಡೀ ರಾಜ್ಯದಲ್ಲಿ ಮಾಡಲು ಹೊರಟಿದೆ. ಈ ಮೂಲಕ ಜಾತಿ-ಜಾತಿಗಳ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದೆ. ಚಾಮುಂಡೇಶ್ವರಿ ತಾಯಿಗೆ ಜಾತಿ ಪಂಗಡಗಳಿಲ್ಲ ಎಂದರು.
ಮಹಿಷ ದಸರಾವನ್ನು ರಾಜ್ಯಾದ್ಯಂತ ಮಾಡಲು ಹೊರಟಿರುವವರಿಗೆ ರಕ್ಷಣೆ ಮತ್ತು ಕುಮ್ಮಕ್ಕು ನೀಡುವ ಕೆಲಸ ಸರ್ಕಾರದಿಂದ ನಡೆದಿದೆ. ಇಂತಹ ವಿಚಾರಗಳನ್ನು ಆರಂಭದಲ್ಲೇ ಚಿವುಟಿ ಹಾಕಬೇಕು. ಆದರೆ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ವಿಕೃತ ಮನಸ್ಸುಗಳು ಹುಟ್ಟಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಪ್ರಚೋದನೆ ನೀಡುತ್ತಿದೆ. ಇದರ ಹಿಂದೆ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರಿಗೂ ಮಹಿಷನಿಗೂ ಏನು ಸಂಬಂಧ? ಮೈಸೂರು ದಸರಾವನ್ನು ಪ್ರತಿ ವರ್ಷದಂತೆ ಈ ವರ್ಷ ಏಕೆ ಮಾಡಲಿಲ್ಲ? ಮಹಿಷ ದಸರಾಕ್ಕೆ ಕುಮಕ್ಕು ನೀಡಿದ್ದೀರಿ. ಈ ಮೂಲಕ ಚಾಮುಂಡೇಶ್ವರಿ ತಾಯಿಗೆ ಅವಮಾನ ಮಾಡಿದ್ದೀರಿ. ಇಂತಹ ವಿಕೃತ ಮನಸ್ಸಿನವರು ಮೈಸೂರಿನಲ್ಲಿ ಬೆಳೆಯುತ್ತಿದ್ದಾರೆ. ಇಂತಹವರ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ನೀವು ಜನರ ಬಳಿ ಕ್ಷಮೆ ಕೇಳಬೇಕು ಎಂದು ಸಚಿವೆ ಆಗ್ರಹಿಸಿದರು.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು: ಮುಂದಿನ ದಸರಾ ವೇಳೆಗೆ ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗಬೇಕು. ಇಂದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಮೈಸೂರು ದಸರಾಕ್ಕೆ ಒಂದು ಹಿನ್ನೆಲೆ, ಚರಿತ್ರೆ ಇದೆ. ಆದರೆ ಈ ಬಾರಿ ದಸರಾದಲ್ಲಿ ಹಲವಾರು ವಿಕೃತಿಗಳು ಕಾಣುತ್ತಿವೆ. 60 ವರ್ಷಗಳ ಕಾಲ ರಾಜ್ಯವನ್ನು ಆಳಿದವರು ಈ ಸಿದ್ದರಾಮಯ್ಯನವರ ರೀತಿಯಲ್ಲಿ ಮಹಿಷ ದಸರಾ ಆಚರಣೆಗೆ ಕುಮ್ಮಕ್ಕೂ ನೀಡಿರಲಿಲ್ಲ. ಈ ವಿಚಾರದಲ್ಲಿ ರಾಜ್ಯದ ಜನತೆಗೆ ನೋವಾಗಿದೆ. ಕರ್ನಾಟಕ ರಾಜ್ಯದಲ್ಲಿ ವಿಕೃತ ಮನಸ್ಸಿನ ಆಡಳಿತ ನಡೆಯುತ್ತಿದೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ಮಹಿಷ ದಸರಾ ಆಗಿರುವುದು ನಮಗೆಲ್ಲ ನೋವುಂಟು ಮಾಡಿದೆ ಎಂದು ಕರಂದ್ಲಾಜೆ ಹೇಳಿಕೆ ನೀಡಿದರು.