ಮೈಸೂರು: ಬಿಜೆಪಿಯ ಬುರುಡೆ ಭರವಸೆ ಸಾಕು, ಕಿವಿ ಮೇಲೆ ಹೂವ ಎಂಬ ಪೋಸ್ಟರ್ಗಳನ್ನು ಜೆ.ಕೆ. ಮೈದಾನದ ಗೋಡೆಗಳ ಮೇಲೆ ಅಂಟಿಸಿ, ಬಿಜೆಪಿ ಸರ್ಕಾರದ ವಿರುದ್ಧ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಭಿಯಾನ ನಡೆಸಲಾಯಿತು. ನಗರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ನಗರದ ಎಲ್ಲ ಜಾಗಗಳು, ಸರ್ಕಾರಿ ಕಟ್ಟಡಗಳು, ನಿಷೇಧಿತ ಪ್ರದೇಶಗಳು, ಕೇಂದ್ರ ಸರ್ಕಾರದ ಕಟ್ಟಡಗಳು, ಗೋಡೆಗಳ ಮೇಲೆ ರಾತ್ರೋರಾತ್ರಿ ಬಿಜೆಪಿಯವರು ನಿಯಮ ಉಲ್ಲಂಘಿಸಿ ಬಿಜೆಪಿ ಭರವಸೆ ಎಂಬ ಪೋಸ್ಟರ್ಗಳನ್ನು ಅಂಟಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಭರವಸೆಗಳನ್ನು ರಾಜ್ಯ ಮತ್ತು ರಾಷ್ಟ್ರದಲ್ಲಿ ಜಾರಿಗೆ ತಂದಿಲ್ಲ. ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ಗಳನ್ನು ನೋಡಿದ್ದಾರೆ. ಸೋಮವಾರದಿಂದ ಎಲ್ಲಾ ವಾರ್ಡ್ಗಳಲ್ಲಿ ಪಾಲಿಕೆ ಸದಸ್ಯರು ಹಾಗೂ ಮಾಜಿ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಕಿವಿಯ ಮೇಲೆ ಹೂವ ಅಭಿಯಾನ ಮಾಡಲಾಗುತ್ತದೆ. ಇಂದು ಸಾಂಕೇತಿಕವಾಗಿ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಮತಗಟ್ಟೆಯ ಮೇಲೆ ಬಿಜೆಪಿ ಭರವಸೆ ಪೋಸ್ಟರ್ ಹಾಕಿರುವ ವಿಚಾರವಾಗಿ ಮಾತನಾಡಿದ ಅವರು, ಇದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಜೊತೆಯಲ್ಲಿ ಮಾತನಾಡಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಕಳೆದ 8 ವರ್ಷಗಳಿಂದ ಆಡಳಿತ ನಡೆಸುತ್ತಿದೆ ಆದರೆ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಅವರು ಕಿವಿ ಮೇಲೆ ಹೂವ ಇಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಭರವಸೆ ಎಂದು ಎಲ್ಲಾ ಕಡೆಗಳಲ್ಲಿ ಪೋಸ್ಟರ್ ಅಂಟಿಸಿದ್ದಾರೆ. ಇಂದು ನಾವು ಈ ಅಭಿಯಾನವನ್ನು ಸಾಂಕೇತಿಕವಾಗಿ ಮಾಡಿದ್ದೇವೆ. ಸೋಮವಾರ ಎಲ್ಲಾ 65 ವಾರ್ಡ್ಗಳಲ್ಲಿ ಈ ಅಭಿಯಾನವನ್ನು ಮಾಡುತ್ತೇವೆ ಎಂದು ಹೇಳಿದರು.
ಶೇ 56ರಷ್ಟು ಭರವಸೆಗಳನ್ನು ಈಡೇರಿಸಿಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಬಿಜೆಪಿ ಬುರುಡೆ ಭರವಸೆ ಬಜೆಟ್ ವಿರುದ್ಧ ನಾವು ಕಿವಿ ಮೇಲೆ ಹೂವ ಅಭಿಯಾನ ಮಾಡುತ್ತಿದ್ದೇವೆ. ಬಿಜೆಪಿ ಭರವಸೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಪಕ್ಷದ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನಿ ನರೇಂದ್ರ ಮೋದಿಯವರು ಇರುವ ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ಕಳೆದ ವರ್ಷ ನೀಡಿದ ಭರವಸೆಗಳಲ್ಲಿ ಶೇ 56ರಷ್ಟನ್ನು ಈಡೇರಿಸಿಲ್ಲ. ಬಿಜೆಪಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಕುರ್ಚಿ 2500 ಕೋಟಿಗೆ ಮಾರಟ್ಟಕ್ಕಿದೆ ಎಂದಿದ್ದರು. ಮಂತ್ರಿಯಾಗಲು 150 ಕೋಟಿ ನೀಡಬೇಕು ಎಂದು ಈ ಭಾಗದ ಎಂಎಲ್ಸಿ ಆರೋಪ ಮಾಡಿದ್ದಾರೆ. ಇದು ಬಿಜೆಪಿಯ ಭರವಸೆಯಾಗಿರಬೇಕು ಎಂದು ಟೀಕಿಸಿದರು.
ಕಾರ್ಪೊರೇಷನ್ 1976 ಆ್ಯಕ್ಟ್ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಬ್ಯಾನರ್ ಪೋಸ್ಟರ್ ಅಂಟಿಸಬಾರದು ಅಂತ ಇದೆ. ಇವರು ಅನುಮತಿ ಪಡೆಯದೆ ಅಂಟಿಸಿದ್ದಾರೆ. ಪಬ್ಲಿಕ್ ಪ್ರಾಪರ್ಟೀಸ್ ಡ್ಯಾಮೇಜ್ ಆ್ಯಕ್ಟ್ ಪ್ರಕಾರ ಕಾರ್ಪೊರೇಷನ್ ಅವರು ಕೇಸ್ ಮಾಡಬೇಕು ಎಂದರು. ಪೊಲೀಸರು, ಕಾರ್ಪೊರೇಷನ್ ಅವರು ಸಾರ್ವಜನಿಕರಿಗಾಗಿ ಕೆಲಸ ಮಾಡಬೇಕು. ಅವರು ಬಿಜೆಪಿ ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಿಜೆಪಿ ಭರವಸೆ ಪೋಸ್ಟರ್ಗಳನ್ನು ಎಲ್ಲಾ ವಾರ್ಡ್ ಗಳಲ್ಲಿ ಹಾಕಿದ್ದಾರೆ. ಅವರ ಮೇಲೆ ಕೇಸ್ ಹಾಕಿ ಎಂದು ಲಕ್ಷ್ಮಣ್ ಒತ್ತಾಯಿಸಿದರು.
ಒಬ್ಬರ ಮೇಲೆ ಐದು ಲಕ್ಷ ಸಾಲ ಇದೆ: ಪೊಲೀಸರು, ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕವಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರ ಮೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದುವರೆಗೆ 2 ಲಕ್ಷ 42,000 ಕೋಟಿ ಸಾಲ ಇತ್ತು, ಅದು ಈಗ 5 ಲಕ್ಷ 42000 ಕೋಟಿ ಆಗಿದೆ. ಒಬ್ಬರ ಮೇಲೆ ಐದು ಲಕ್ಷ ಸಾಲ ಇದೆ ಜನರನ್ನು ಇನ್ನೂ ಎಷ್ಟು ದಿನ ಮರಳು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಇನ್ನು ಪ್ರತಿಭಟನೆಯಲ್ಲಿ ಶಿವಣ್ಣ, ಜಿ.ಪಂ ಮಾಜಿ ಅಧ್ಯಕ್ಷ ರಾಮು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ:'ಸಾಕಪ್ಪಾ ಸಾಕು-ಕಿವಿ ಮೇಲೆ ಹೂವ' : ಮಂಗಳೂರಿನಲ್ಲಿ ಬಿಜೆಪಿ ಬ್ಯಾನರ್ ಮೇಲೆ ಕಾಂಗ್ರೆಸ್ ಪೋಸ್ಟರ್