ಮೈಸೂರು: ಡೆತ್ ನೋಟ್ ಬರೆದಿಟ್ಟು ಕಂಪ್ಯೂಟರ್ ಆಪರೇಟರ್ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ಪರಮೇಶ್ವರ್ ಆತ್ಮಹತ್ಯೆ ಮಾಡಿಕೊಂಡ ಕಂಪ್ಯೂಟರ್ ಆಪರೇಟರ್. ಹುಲ್ಲಹಳ್ಳಿ ಹೋಬಳಿಯ ನಾಡ ಕಚೇರಿಯಲ್ಲಿ ಕಳೆದ 20 ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ ಆಗಿ ಹಂಗಾಮಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ವಿಕಲಚೇತನರಾಗಿದ್ದ ಪರಮೇಶ್ವರ್ (42), ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಕಲಚೇತನರಾಗಿದ್ದ ಪರಮೇಶ್ವರ್ (42) ಭಾನುವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅವಶ್ಯ ಇದ್ದುದರಿಂದ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಧಿಕಾರಿಯೊಬ್ಬರು ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರುವ ಪರಮೇಶ್ವರ್, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಅನ್ನು ತನ್ನ ಮೊಬೈಲ್ನ ಡಿಪಿಗೆ ಹಾಕಿದ್ದರು. ತಪ್ಪಿತಸ್ಥ ಆ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತ ವ್ಯಕ್ತಿಯ ಕುಟುಂಬಸ್ಥರು, ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಹಾಗೂ ಶಾಸಕ ದರ್ಶನ್ ದ್ರುವನಾರಾಯಣ್ ಎದುರು ತಮ್ಮ ಅಳಲು ತೋಡಿಕೊಂಡಿದ್ದರು. ಮೃತ ಪರಮೇಶ್ವರ್ ವಿಕಲಚೇತನನಾಗಿದ್ದು, ಮದುವೆ ಸಹ ಆಗಿರಲಿಲ್ಲ. ಮನೆಯ ಜವಾಬ್ದಾರಿ ಇವರ ಮೇಲಿತ್ತು. ಹಾಗಾಗಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮದ ಮುಖಂಡ ತಮ್ಮಣ್ಣೆಗೌಡ ಕೂಡ ಒತ್ತಾಯಿಸಿದರು.
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಇಲಾಖಾ ವಿಚಾರಣೆ ಕಾಯ್ದಿರಿಸಿರುವ ಪ್ರಾದೇಶಿಕ ಆಯುಕ್ತ ಡಾ. ಜಿ ಸಿ ಪ್ರಕಾಶ್ ಅವರು ಹೆಸರು ಕೇಳಿ ಬಂದ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮೆಟ್ರೋ ರೈಲು ಹಳಿಗೆ ಹಾರಿ ಆತಂಕ ಸೃಷ್ಟಿಸಿದ ಯುವಕ