ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ವೂ ಚುನಾವಣೆಯನ್ನೂ ಗುರಿಯಾಗಿಸಿಕೊಂಡು ನೀಡಿರುವ ಬಜೆಟ್ ಆಗಿದೆ. ಈ ಬಜೆಟ್ ಕೇವಲ ನಾಮಕಾವಸ್ಥೆ ಬಜೆಟ್ ಅಷ್ಟೇ, ಇದು ಕಾರ್ಯ ರೂಪಕ್ಕೆ ಬರುವುದಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅಭಿಪ್ರಾಯ ತಿಳಿಸಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮಾಧ್ಯಮದವರೊಮದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಇದೊಂದು ಚುನಾವಣಾ ಪ್ರಣಾಳಿಕೆ ಘೋಷಣೆ ಅಷ್ಟೇ. ಬೊಮ್ಮಾಯಿ ಬಜೆಟ್ ಗೋವಿಂದಾ ಗೋವಿಂದಾ ಎಂಬ ಘೋಷಣೆ ಕೂಗುವ ಮೂಲಕ ಬಜೆಟ್ ಕುರಿತು ವ್ಯಂಗ್ಯ ಮಾಡಿದರು.
ಅವರು ಕೊಟ್ಟಿರುವ ಯಾವುದೇ ಯೋಜನೆಗಳು ಅನುಷ್ಠಾನಕ್ಕೆ ಬರುವುದಿಲ್ಲ, ಇದು ಮತದಾರರ ಓಲೈಕೆ ಆಗಿದ್ದು, ಜನರ ಕಿವಿಗೆ ಹೂವು ಇಟ್ಟು, ಖಾಲಿ ಚೆಂಬು ಖಾಲಿ ಕರಟೆ ಕೊಟ್ಟಿದ್ದಾರೆ ಎಂದು ಟೀಕಿಸಿದರು. ತಾವು ಸಹ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಸವರಾಜ ಬೊಮ್ಮಾಯಿ ಅವರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹಗೆ ತೆಗಳುವುದು ಬಿಟ್ಟರೆ ಬೇರೇನನ್ನೂ ಕೇಳಬೇಡಿ : ಮೈಸೂರಿಗೆ ಈ ಬಜೆಟ್ ನಲ್ಲಿ ಯಾವುದೇ ರೀತಿಯ ಲಾಭವೂ ಆಗಿಲ್ಲ. ಕೇಂದ್ರ ಸರ್ಕಾರದ ಬಜೆಟ್ ನಲ್ಲೂ ಸಹ ಯಾವುದೇ ತರಹದ ಅನುದಾನವನ್ನೂ ಮೈಸೂರಿಗೆ ತಂದಿಲ್ಲ. ಮೈಸೂರಿಗೆ ಯಾವುದೇ ಪ್ರಗತಿಪರ ಯೋಜನೆಗಳನ್ನಾಗಲಿ ಪ್ರತಾಪ್ ಸಿಂಹ ಸೇರಿದಂತೆ, ಶ್ರೀನಿವಾಸ್ ಪ್ರಸಾದ್ ಅವರು ತಂದಿಲ್ಲ. ಪ್ರತಾಪ್ ಸಿಂಹ ಅವರಿಗೆ ಬೆಳಗೆದ್ದರೆ ಸಾಕು ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವುದು, ಕಾಂಗ್ರೆಸ್ ಪಕ್ಷದವರನ್ನು ಟೀಕೆ ಮಾಡುವುದನ್ನು ಬಿಟ್ಟರೆ ಅವರಿಗೆ ಬೇರೇನೂ ಕೇಳಬೇಡಿ ಎಂದು ಅಪಹಾಸ್ಯ ಮಾಡಿದರು.
ನೋಡಲು ಅಷ್ಟೇ ಡಬಲ್ ಎಂಜಿನ್ ಸರ್ಕಾರ: ಕೇಂದ್ರದಲ್ಲೂ ರಾಜ್ಯದಲ್ಲೂ ಎರಡು ಕಡೆ ಅವರದ್ದೇ ಆದ ಡಬಲ್ ಎಂಜಿನ್ ಸರ್ಕಾರ ಇದೆ. ಆದರೆ ಅಭಿವೃದ್ಧಿ ಮಾತ್ರ ಏನು ಆಗಿಲ್ಲ, ಬರೀ ಭರವಸೆ ಅಷ್ಟೇ. ವಾರ್ಷಿಕವಾಗಿ ಒಬ್ಬ ವ್ಯಕ್ತಿಯ ತಲಾ ಆದಾಯ 3 ಲಕ್ಷ ಎಂದು ಹೇಳುತ್ತಾರೆ. ಎಲ್ಲಿದೆ ಅಷ್ಟು ತಲಾ ಆದಾಯ. ಸಾಮಾನ್ಯ ವ್ಯಕ್ತಿಯ ಆದಾಯವನ್ನು ಮತ್ತು ಅದಾನಿ, ಅಂಬಾನಿ ಆದಾಯವನ್ನು ಕೂಡಿಸಿ ಆಮೇಲೆ ಅದನ್ನು ಮೂವರಿಂದ ಭಾಗಿಸುವುದು. ಆದರೆ ಆ ರೀತಿ ಮಾಡಿದರೆ ಹೇಗೆ, ಎಲ್ಲಿ ಅಷ್ಟು ತಲಾ ಆದಾಯ ಇದೆ. ಬಡವ ಬಡವನಾಗಿಯೇ ಇದ್ದಾನೆ. ಸಾಮಾನ್ಯರ ಆದಾಯ 10,000 ರೂ. ತಿಂಗಳಿಗೆ ಅಷ್ಟೇ. ಹಳ್ಳಿಗಳಲ್ಲಿ ಅದಕ್ಕಿಂತಲೂ ಕಡಿಮೆ ಇದೆ ಎಂದು ಎಂ. ಲಕ್ಷ್ಮಣ್ ಆರೋಪಿಸಿದರು.
ಹೊಸ ಪೆನ್ಶನ್ ಯೋಜನೆ ತಂದಿರುವುದೇ ಬಿಜೆಪಿ: ಸರ್ಕಾರಿ ನೌಕರರು ಎನ್ ಪಿ ಎಸ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹೊಸ ಪೆನ್ಶನ್ ಯೋಜನೆ ರದ್ದು ಮಾಡಿ ಹಳೆ ಪೆನ್ಶನ್ ಯೋಜನೆಯನ್ನು ಜಾರಿಗೆ ತನ್ನಿ ಎಂದು ಹಲವಾರು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ನೌಕರರ ಸಂಘದ ಅಧ್ಯಕ್ಷರೇ ಬಿಜೆಪಿಯ ನಾಯಕರ ಮನೆಯಲ್ಲಿದ್ದಾರೆ. ಅವರು ಬಸವರಾಜ ಬೊಮ್ಮಾಯಿ ಮನೆ ಅಥವಾ ಯಡಿಯೂರಪ್ಪನವರ ಮನೆಯಲ್ಲಿ ಇರುತ್ತಾರೆ. ಹೀಗೆ ಅಧ್ಯಕ್ಷರೇ ಅವರ ಹತ್ತಿರ ಇರಬೇಕಾದರೆ ಇನ್ನೂ ಅವರು ಹೇಗೆ ಅದನ್ನು ಜಾರಿಗೊಳಿಸುತ್ತಾರೆ. ಹೊಸ ಪೆನ್ಶನ್ ಯೋಜನೆಯನ್ನು ತಂದಿರುವುದೇ ಬಿಜೆಪಿ ಅಂದ ಮೇಲೆ ಅದನ್ನು ಅವರೇ ಹೇಗೆ ರದ್ದು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ನಾಳೆ ಕಿವಿ ಮೇಲೆ ಹೂವು ಇಟ್ಟಿರುವ ಪೋಸ್ಟರ್ ಅಭಿಯಾನ: ಮೈಸೂರಿನ ಎಲ್ಲಾ ಕಡೆ ಬಿಜೆಪಿ ಭರವಸೆ ಎಂಬ ಪೋಸ್ಟರ್ ಅಂಟಿಸಿದ್ದಾರೆ. ಈ ಪೋಸ್ಟರ್ ಇರುವ ಕಡೆ ಕಾಂಗ್ರೆಸ್ ಕಿವಿಯ ಮೇಲೆ ಹೂ ಇರುವ ಪೋಸ್ಟರ್ ಗಳನ್ನು ಅಂಟಿಸುತ್ತೇವೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂಓದಿ:ಸುಸ್ಥಿರ ಗಣಿಗಾರಿಕೆ ಕಲ್ಲು ಉದ್ಯಮದ ದೊಡ್ಡ ಹೊಣೆಗಾರಿಕೆ: ಸಿಎಂ ಬಸವರಾಜ ಬೊಮ್ಮಾಯಿ