ಮೈಸೂರು: ರಾಜ್ಯದ ಬೊಕ್ಕಸ ಖಾಲಿಯಾಗಿಲ್ಲ, ಸಿಎಂ ಪುತ್ರ ವಿಜಯೇಂದ್ರನ ಬೊಕ್ಕಸ ಖಾಲಿಯಾಗಿರಬೇಕು ಎಂದು ಏಕವಚನದಲ್ಲೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ ಪ್ರಸಂಗ ನಡೆದಿದೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಹೆಚ್‌ಡಿಕೆ, ನೆರೆ ಹಾವಳಿಗೆ ಪರಿಹಾರ ನೀಡಲು ರಾಜ್ಯದ ಬೊಕ್ಕಸ ಖಾಲಿಯಿದೆ ಎಂದು ಸಿಎಂ ಹೇಳ್ತಾರೆ. ಆದ್ರೆ, ರಾಜ್ಯದ ಬೊಕ್ಕಸ ಸಂಪದ್ಭರಿತವಾಗಿದೆ. ನೆರೆ ಹಾವಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಮುಲಾಜಿಗೆ ಒಳಗಾಗದೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ರು.
ಸಿಎಂ ಮಗ ವಿಜಯೇಂದ್ರ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳ್ತಿದ್ದಾರಲ್ಲ ಎಂಬ ಮಾಧ್ಯಮದರದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ವಿಜಯೇಂದ್ರ ಯಾರು? ಅವನಿಗೆ ಏನು ಗೊತ್ತಿದೆ? ಅವನಿಗೇಕೆ ಪ್ರಾಮುಖ್ಯತೆ ಕೊಡಬೇಕು? ನಿನ್ನೆ ಮೊನ್ನೆಯಿಂದ ಬಿಜೆಪಿ ನಾಯಕ ಎಂದು ಬಿಂಬಿಸಿಕೊಂಡು ಹೋಗುತ್ತಿದ್ದಾನೆ ಎಂದು ಗರಂ ಆದ್ರು.
ಪಾಪ ಆ ಹುಡುಗನಿಗೆ ದುಡ್ಡು ಲಪಟಾಯಿಸುವುದು ಒಂದೇ ಗೊತ್ತಿರುವುದು. ಬಹುಶ: ಅವನ ಬೊಕ್ಕಸ ಖಾಲಿಯಾಗಿರಬೇಕು. ಅದನ್ನು ತುಂಬಿಸಿಕೊಳ್ಳಲು ಓಡಾಡುತ್ತಿದ್ದಾನೆ ಎಂದು ಬಿ.ವೈ. ವಿಜಯೇಂದ್ರರ ಹೆಸರು ಹೇಳದೆ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ಸಮನ್ವಯದ ಕೊರತೆ ಇದೆ. ದಸರಾ ಸಚಿವರು ದಸರಾ ನಂತರ ನೆರೆ ಪರಿಹಾರದ ಬಗ್ಗೆ ಮಾತನಾಡುತ್ತೇನೆ ಎನ್ನುತ್ತಾರೆ. ಇನ್ನೊಬ್ಬ ಉಪಮುಖ್ಯಮಂತ್ರಿ ನನಗೂ 100 ಎಕರೆ ಜಮೀನಿದೆ ನನಗೂ ಪರಿಹಾರ ಕೊಡಿ ಎನ್ನುತ್ತಾರೆ ಎಂದು ಟೀಕಿಸಿದ್ರು.
ಇವರು ಜನರ ಸಂಕಷ್ಟಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ, ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ರು.