ಮೈಸೂರು : ಕನ್ನಂಬಾಡಿ ಅಣೆಕಟ್ಟು ಬಿರುಕು ಇಲ್ಲ ಎಂದು ಇಂಜಿನಿಯರ್ ಹೇಳುತ್ತಾರೆ. ಬಿರುಕು ಇದೆ ಎಂದು ಸಂಸದೆ ಹೇಳುತ್ತಾರೆ. ಬಿರುಕು ಇದೆಯಾ ಅಥವಾ ಇಲ್ಲವಾ? ಎಂಬ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ಕನ್ನಂಬಾಡಿ ಅಣೆಕಟ್ಟೆಯಲ್ಲಿ ಬಿರುಕು ಇದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಈ ಬಗ್ಗೆ ಕನ್ನಂಬಾಡಿ ಇಂಜಿನಿಯರ್ ವಿಜಯ್ ಕುಮಾರ್ ಬಿರುಕು ಇಲ್ಲ ಅಂತಾ ಹೇಳಿಕೆ ನೀಡಿದ್ದಾರೆ. ಆದರೆ, ಸಂಸದೆ ಸುಮಲತಾ ಬಿರುಕು ಇದೇ ಎಂದು ಹೇಳಿದ್ದಾರೆ. ನೀರಾವರಿ ಇಲಾಖೆ ಮುಖ್ಯಮಂತ್ರಿಗಳ ಬಳಿ ಇದೆ. ಹೀಗಾಗಿ, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸ್ಪಷ್ಟಪಡಿಸಿಸಬೇಕು ಎಂದರು.
ಕದ್ದು ಮುಚ್ಚಿ ಗಣಿಗಾರಿಕೆ ನಡೆಯುತ್ತಿದೆ : ಕೆಆರ್‌ಎಸ್ ವಿಚಾರದಲ್ಲಿ ಮಾತನಾಡುವಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಕರೆದು ತಕ್ಷಣ ತಪ್ಪನ್ನು ತಿದ್ದಿಕೊಂಡ ಚೆಲುವರಾಯಸ್ವಾಮಿ, ಕನ್ನಂಬಾಡಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಕಾವಲು ಇದ್ದು ಕದ್ದು ಮುಚ್ಚಿ ಗಣಿಗಾರಿಕೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಭಾಗದಲ್ಲಿ ಬಹಳ ವರ್ಷಗಳಿಂದ ಪ್ರಭಾವಿಗಳು ಗಣಿಗಾರಿಕೆ ನಡೆಸುತ್ತಿದ್ದು, ಇಲ್ಲಿ ನಿಷೇಧ ಮಾಡಿರುವ ಗಣಿಗಾರಿಕೆ ತಾತ್ಕಾಲಿಕ ಅಥವಾ ಪೂರ್ಣ ಪ್ರಮಾಣದ್ದೇ ಎಂಬುದನ್ನು ಸ್ಪಷ್ಟಪಡಿಸಬೇಕು ಆಗ್ರಹಿಸಿದರು.
ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ : ಇಂದು ಗಣಿ ಪ್ರದೇಶಗಳಿಗೆ ಭೇಟಿ ನೀಡಿರುವ ಸಂಸದೆ ಸುಮಲತಾ ಅಲ್ಲಿನ ಪರಿಸ್ಥಿತಿಯನ್ನು ನೋಡಲಿದ್ದಾರೆ. ಮಂಡ್ಯದಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ಓದಿ: 'ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜುಲೈ 11ರಂದು ರಾಷ್ಟ್ರೀಯ ಹೆದ್ದಾರಿ ಬಂದ್'