ಮೈಸೂರು: ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಮಹಿಳಾ ವ್ಯಾಪಾರಿ ಬಳಿ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಗಕ್ಷೇಮ ವಿಚಾರಿಸಿದ ಘಟನೆ ಚಾಮುಂಡಿ ಬೆಟ್ಟದಲ್ಲಿ ನಡೆಯಿತು.
ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ನಾಡ ಅಧಿದೇವತೆ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದ ಸಿಎಂ, ಬಳಿಕ ದೇವಸ್ಥಾನದಿಂದ ದಾಸೋಹ ಭವನದ ಗೇಟ್ ತನಕ ನಡೆದುಕೊಂಡು ಬಂದು ಸಾರ್ವಜನಿಕರಿಗೆ ದಸರಾ ಶುಭಾಶಯ ತಿಳಿಸಿದರು. ಅಲ್ಲದೇ, ಹತ್ತಿರ ಬಂದ ಯುವಕರಿಗೆ ಹಸ್ತಲಾಘವ ನೀಡಿ ಕಳುಹಿಸಿದರು.
ದೇವಸ್ಥಾನದಿಂದ ನಡೆದುಕೊಂಡು ಬರುವಾಗ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಮಹಿಳಾ ವ್ಯಾಪಾರಿ ಬಳಿ ಸಿಎಂ ತೆರಳಿದಾಗ, ಒಂದು ಕ್ಷಣ ಮಹಿಳೆ ಗಾಬರಿಯಾದರು. ಈ ವೇಳೆ, ಸಿಎಂ ಹೆದರ ಬೇಡಿ, ಹೇಗಿದೆ ವ್ಯಾಪಾರ?, ಎರಡು ವರ್ಷದ ನಂತರ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದೆಯಾ ? ಎಂದು ವ್ಯಾಪಾರಿ ಬಳಿ ಹೋಗಿ ಕುಶಲೋಪರಿ ವಿಚಾರಿಸಿದರು.
ಇದನ್ನೂ ಓದಿ: ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಸಿಎಂ.. ಮೆರವಣಿಗೆಗೆ ಚಾಲನೆ
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದಾರೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಹಬ್ಬ ಅಂತ ಬೆಲೆ ಜಾಸ್ತಿ ಮಾಡಿದ್ದಿರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳೆ, ಇಲ್ಲ ಅಣ್ಣಾ. ಯಾವ ಬೆಲೆ ಹೆಚ್ಚಳ ಮಾಡಿಲ್ಲ. ಮಾರುಕಟ್ಟೆ ದರದಲ್ಲಿಯೇ ವ್ಯಾಪಾರ ಮಾಡುತ್ತಿದ್ದೇವೆ ಎಂದಾಗ, ಒಳ್ಳೆಯದಾಗಲಿ ಎಂದು ಹೇಳಿ ಸಿಎಂ ಅಲ್ಲಿಂದ ತೆರಳಿದರು.