ಮೈಸೂರು : ವಿದೇಶಗಳಿಂದ ತರಿಸಿದ್ದ ಎರಡು ಗಂಡು ಗೊರಿಲ್ಲಗಳಿಗೆ ನೂತನವಾಗಿ ನಿರ್ಮಿಸಲಾಗಿದ್ದ ಮನೆಯನ್ನು ವರ್ಚುವಲ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಸಹ ಭಾಗವಹಿಸಿದ್ದರು.
ಮೈಸೂರಿನ ಮೃಗಾಲಯದಲ್ಲಿ ಇನ್ಫೋಸಿಸ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ 2 ಕೋಟಿ 70 ಲಕ್ಷ ರೂಪಾಯಿಯಲ್ಲಿ ನೂತನವಾಗಿ ಗೊರಿಲ್ಲಾ ಮನೆಯ ನಿರ್ಮಾಣಕ್ಕೆ ಸಹಾಯ ಮಾಡಲಾಗಿತ್ತು. ಅದರ ಅನುದಾನದಲ್ಲಿ ಗೊರಿಲ್ಲಾ ಮನೆ ನಿರ್ಮಾಣವಾಗಿದೆ. ಜರ್ಮನಿಯಿಂದ ತರಿಸಲಾಗಿದ್ದ ಎರಡು ಗೊರಿಲ್ಲಾಗಳನ್ನ ಈ ಮನೆಯಲ್ಲಿ ಇಂದು ಬಿಡಲಾಯಿತು.
ಜರ್ಮನಿಯಿಂದ ತರಿಸಲಾದ ಗೊರಿಲ್ಲಾಗಳು
ಜರ್ಮನಿಯ ಆಲ್ ವೆಟರ್ ಮೃಗಾಲಯದಿಂದ ದಿನಾಂಕ 19/08/2021ರಲ್ಲಿ ಮೈಸೂರು ಮೃಗಾಲಯಕ್ಕೆ ಗೊರಿಲ್ಲಾಗಳನ್ನ ತರಿಸಲಾಗಿತ್ತು. ತಾಬೊ (14 ವರ್ಷ) ಮತ್ತು ಡೆಂಬ (8 ವರ್ಷ)ಎಂಬ ಗೊರಿಲ್ಲಾಗಳು ಅಣ್ಣ-ತಮ್ಮಂದಿರು. ಇವು ಮೈಸೂರಿನ ಮೃಗಾಲಯದ ವಾತಾವರಣಕ್ಕೆ ಹೊಂದಿಕೊಂಡಿವೆ. ಇವು ಮೈಸೂರು ಮೃಗಾಲಯಕ್ಕೆ ಬರುವ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿವೆ.
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಮಾಧ್ಯಮಗಳೊಂದಿಗೆ ಮಾತನಾಡಿ, ಮೈಸೂರು ಮೃಗಾಲಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನ ಎಂದು ಹೇಳಿದರು. ಮೈಸೂರು ಮೃಗಾಲಯದಲ್ಲಿ ಮಾತ್ರ ಗೊರಿಲ್ಲಾಗಳು ಇದ್ದವು. ನಮ್ಮ ಮೃಗಾಲಯದಲ್ಲಿ ಇದ್ದ ಪೊಲೊ ಎಂಬ ಹೆಸರಿನ ಗೊರಿಲ್ಲಾ ವಯೋಸಹಜವಾಗಿ 2014ರಲ್ಲಿ ಮೃತಪಟ್ಟಿತ್ತು.
ಇದಾದ ನಂತರ ಸುಮಾರು ಬಾರಿ ನಾವು ಗೊರಿಲ್ಲಾ ತರಲು ಪ್ರಯತ್ನ ಪಟ್ಟಿದ್ದೆವು ಆಗಿರಲಿಲ್ಲ. ನಂತರ ಜರ್ಮನಿಯವರು ನಿಮಗೆ ಗೊರಿಲ್ಲಾಗಳನ್ನು ಕೊಡುತ್ತೇವೆ. ಆದರೆ, ನೀವು ಗೊರಿಲ್ಲಾ ಮನೆಯನ್ನ ಅಂತರಮಟ್ಟದಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿದ್ದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ನಮ್ಮಲ್ಲಿ ಅದನ್ನು ನಿರ್ಮಾಣ ಮಾಡಲು ಕಷ್ಟವಾಯಿತು. ಆ ನಂತರ ಇನ್ಫೋಸಿಸ್ ಫೌಂಡೇಶನ್ ಅನ್ನು ಕೇಳಿಕೊಂಡಾಗ ಸುಧಾಮೂರ್ತಿಯವರು ಸಹಾಯ ಮಾಡಲು ಒಪ್ಪಿಕೊಂಡು ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಇದಕ್ಕೆ 2 ಕೋಟಿ 70 ಲಕ್ಷ ಖರ್ಚಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಮೈಸೂರು ಮೃಗಾಲಯದಲ್ಲಿ ಮಾತ್ರ ಗೊರಿಲ್ಲಾಗಳಿವೆ. ಹಾಗಾಗಿ, ಜನರು ಬೇರೆ ದೇಶಗಳಿಗೆ ಹೋಗದೆ ನಮ್ಮ ದೇಶದಲ್ಲೇ ಗೊರಿಲ್ಲಾಗಳನ್ನು ನೋಡಬಹುದು. ಈ ಗೊರಿಲ್ಲಾಗಳಿಂದ ಮೃಗಾಲಯಕ್ಕೆ ಕಳೆ ಬಂದಿದೆ ಎಂದು ಹೇಳಿ ಇದರ ಜೊತೆಗೆ ಪ್ರವಾಸಿಗರು ಹೆಚ್ಚಾಗಿ ಬರುವುದರಿಂದ ಕರ್ನಾಟಕ ಮತ್ತು ಮೈಸೂರು ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ ಎಂದರು.
ಓದಿ: ಶಿವಮೊಗ್ಗದಲ್ಲಿ ಪುನೀತ್ ರಾಜಕುಮಾರ್ ಫ್ಲೆಕ್ಸ್ ಕಿತ್ತವನಿಗೆ ಬಿತ್ತು ಗೂಸಾ