ಮೈಸೂರು: ಸಚಿವ ಸಂಪುಟ ರಚನೆಯ ನಂತರ ಯಾವುದೇ ರೀತಿಯ ಅಸಮಾಧಾನವಿಲ್ಲ. ಆನಂದ್ ಸಿಂಗ್ ಅವರು ನನ್ನನ್ನು ಭೇಟಿಯಾಗಿದ್ದು, ಅವರಿಗೆ ಪರಿಸ್ಥಿತಿಯನ್ನು ತಿಳಿಸಿದ್ದೇನೆ. ಈಗ ಅವರು ಸಮಾಧಾನವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಚಾಮುಂಡಿ ತಾಯಿ ದರ್ಶನ ಪಡೆದ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿದರು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯುವ ಇಚ್ಚೆಯಿತ್ತು. ಅದರಂತೆ ತಾಯಿಯ ಆಶೀರ್ವಾದ ಪಡೆದು ನಾಡಿಗೆ ಸುಖ, ಸಮೃದ್ಧಿ, ಮಳೆ, ಬೆಳೆ ಹಾಗೂ ಕೊರೊನಾ ಮುಕ್ತವಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು.
ಮೇಕೆದಾಟು ಯೋಜನೆ ಬಗ್ಗೆ ಡಿಪಿಆರ್ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಕೂಡಲೇ ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆಯಬಹುದು. ಈ ಬಗ್ಗೆ ಮತ್ತೊಮ್ಮೆ ನೀರಾವರಿ ಸಚಿವರು ಹಾಗೂ ನಾನು ದೆಹಲಿಗೆ ಹೋಗಿ ಕೇಂದ್ರ ಸಚಿವರು ಹಾಗೂ ವಕೀಲರನ್ನು ಭೇಟಿಯಾಗಿ ಯೋಜನೆ ಬಗ್ಗೆ ಚರ್ಚಿಸಲಿದ್ದೇವೆ. ಶೀಘ್ರವೇ ಮೇಕೆದಾಟು ಯೋಜನೆಯಲ್ಲಿ ನಮ್ಮ ಪಾಲಿನ ನೀರು ಪಡೆಯುವ ಬಗ್ಗೆ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದರು.
ಗಡಿ ಜಿಲ್ಲೆಗಳಲ್ಲಿ ಕೋವಿಡ್ ಮುಂಜಾಗ್ರತೆ ಕ್ರಮವಾಗಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿ ತಿಳಿಯಲು ಖುದ್ದಾಗಿ ಗಡಿ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಇಂದು ಜಿಲ್ಲೆಯ ಕೊರೊನಾ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದು ಸಿಎಂ ಹೇಳಿದರು.
ನೀರಿನ ವಿಚಾರದಲ್ಲಿ ತಮಿಳುನಾಡಿನಲ್ಲಿ ಮೊದಲಿನಿಂದಲೂ ರಾಜಕೀಯ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಅಧಿಕಾರವನ್ನು ಸಹ ಪಡೆದಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನೀರಿನ ವಿಚಾರದಲ್ಲಿ ಜನರ ಮತ್ತು ರೈತರ ಹಿತ ಮುಖ್ಯ.
ಇದನ್ನೂ ಓದಿ : ಸಚಿವ ಸ್ಥಾನ ಸಿಕ್ಕಿರುವುದು ಸನ್ಮಾನ ಸ್ವೀಕರಿಸಲು ಅಲ್ಲ, ಜನ ಸೇವೆ ಮಾಡಲು: ಹೆಚ್ಡಿಕೆ
ಸಚಿವ ಸಂಪುಟ ರಚನೆ ನಂತರ ಅಸಮಾಧಾನದ ಬಗ್ಗೆ ಉತ್ತರಿಸಿದ ಸಿಎಂ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಆನಂದ್ ಸಿಂಗ್ ನನ್ನನ್ನು ಭೇಟಿಯಾಗಿ ಮಾತನಾಡಿದ್ದಾರೆ. ಈಗಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇನೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತ್ತೊಮ್ಮೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ಯಡಿಯೂರಪ್ಪ ಅವರಿಗೆ ನೀಡಿದ ಕ್ಯಾಬಿನೆಟ್ ಸ್ಥಾನಮಾನಗಳನ್ನು ವಾಪಸ್ ಪಡೆಯುವಂತೆ ಅವರು ಪತ್ರ ಬರೆದಿದ್ದಾರೆ. ಅದಕ್ಕೆ ನಾನು ಒಪ್ಪಿಕೊಂಡಿದ್ದೇನೆ. ಅವರಿಗೆ ಮಾಜಿ ಮುಖ್ಯಮಂತ್ರಿಗೆ ನೀಡುವ ಸ್ಥಾನಮಾನಗಳು ಮುಂದುವರೆಯಲಿವೆ ಎಂದರು.
ಸಂಪುಟದಲ್ಲಿ ಸ್ಥಾನ ಸಿಗದ ಬಗ್ಗೆ ಅಸಮಾಧಾನಗೊಂಡಿರುವ ರಾಮದಾಸ್ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು.