ಮೈಸೂರು: ತುಂಬಿ ತುಳುಕುತ್ತಿರುವ ಮೈಸೂರಿನ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಪ್ರದಾಯದಂತೆ ಬಾಗಿನ ಸಮರ್ಪಣೆ ಮಾಡಿದರು. ಅಭಿಜಿನ್ ಮುಹೂರ್ತದ ಕನ್ಯಾ ಲಗ್ನದಲ್ಲಿ ಸಿಎಂ ಹಾಗು ಅವರ ಪತ್ನಿ, ಶಾಸಕ ಅನಿಲ್ ಚಿಕ್ಕಮಾದು ಜೊತೆಗೂಡಿ ಬಾಗಿನ ಅರ್ಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿಸಿ ಬಗಾದಿ ಗೌತಮ್, ಎಸ್‌ಪಿ ಆರ್.ಚೇತನ್ ಸೇರಿದಂತೆ ಇತರೆ ಅಧಿಕಾರಿಗಳೂ ಇದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಬಿನಿ ಜಲಾಶಯದ ಉದ್ಯಾನವನ ಸ್ವಲ್ಪ ಗೊಂದಲದಲ್ಲಿದೆ. ಈ ಒಂದು ಗೊಂದಲವನ್ನು ಆದಷ್ಟು ಬೇಗ ನಿವಾರಣೆ ಮಾಡಿ, ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನವನ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.
ಹೆಚ್.ಡಿ.ಕೋಟೆ ತಾಲೂಕು ನಂಜುಂಡಪ್ಪ ವರದಿಯಲ್ಲೂ ಹಿಂದುಳಿದ ತಾಲೂಕು ಅಂತ ಇದೆ. ಅದರ ಸಮಗ್ರ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದೇವೆ. ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಶಾಲಾ ಕಟ್ಟಡ ನಿರ್ಮಿಸಲಾಗುವುದು. ಪಿಹೆಚ್ಸಿ ಸೆಂಟರ್ ಅಭಿವೃದ್ಧಿ ಮಾಡಲಾಗುವುದು. ಶಾಸಕರಿಗೆ ಈಗಾಗಲೇ ಅನುದಾನ ನೀಡಿದ್ದೇನೆ. ಮೊನ್ನೆ ಮಳೆ ಬಂದಾಗ ಮನೆ ಬಿದ್ದಿರುವುದು ಸೇರಿದಂತೆ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಕೂಡಲೇ ಅನುದಾನ ನೀಡುವಂತೆ ಏರ್ಪಾಟು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮೈದುಂಬಿ ಹರಿಯುತ್ತಿರುವ ಕಬಿನಿಯ ವಿಹಂಗಮ ನೋಟ