ಮೈಸೂರು: ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯಲ್ಲಿ ನನ್ನದಾಗಲಿ ಅಥವಾ ಡಿ.ಕೆ ಶಿವಕುಮಾರ್ ಅವರದ್ದಾಗಲಿ ಪಾತ್ರ ಮಾತ್ರ ಇರುವುದಿಲ್ಲ. ಅದು ಪ್ರತ್ಯೇಕ ಚುನಾವಣೆ ಮೇಲೆ ನಡೆಯುತ್ತದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅದು ಪ್ರತ್ಯೇಕವಾದ ವ್ಯವಸ್ಥೆ. ಚುನಾವಣೆ ನಡೆದ ಮೇಲೆ ನೇಮಕಾತಿಯಾಗಿದೆ. ಹೊಂದಾಣಿಕೆಯಿಂದ ಒಬ್ಬರ ನೇಮಕಾತಿಯಾಗಿದೆ. ಇದರ ಬಗ್ಗೆ ನಾನು ಸಲಹೆ ಕೊಟ್ಟಿದ್ದೆ. ಇದರಲ್ಲಿ ನನ್ನದಾಗಲಿ, ಡಿ.ಕೆ.ಶಿವಕುಮಾರ್ ಅವರದ್ದಾಗಲಿ ಪಾತ್ರ ಇರುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದರು.
ಪಿಯುಸಿ ಪರೀಕ್ಷೆಯನ್ನು ರದ್ದುಮಾಡಿದ್ದಾರೆ. ಆದರೆ, ಎಸ್ಸೆಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಮನ್ವಯತೆ ಇಲ್ಲ.
ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕ ಘೋಷಣೆ ಮಾಡಿರುವುದು ನನಗೆ ಗೊತ್ತೇ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿರುವುದೇ ಇದಕ್ಕೆ ಸಾಕ್ಷಿ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ
ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ಸಚಿವ ಸುಧಾಕರ್ ನಮ್ಮಲ್ಲಿ ಲಸಿಕೆ ದಾಸ್ತಾನು ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಇದ್ದರೆ ಜನ ಯಾಕೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಎಂದು ಪ್ರಶ್ನಿಸಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಿಂದ 36 ಜನ ಮೃತಪಟ್ಟರೂ, ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯಿಂದ ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಹೋಗಿಲ್ಲ. ಪರಿಹಾರ ಕೊಡಿ ಎಂದು 3 ಪತ್ರ ಬರೆದಿದ್ದೇನೆ. ಸುಪ್ರೀಂಕೋರ್ಟ್ ಕೂಡ ಪರಿಹಾರ ಕೊಡಿ ಎಂದು ಹೇಳಿದೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ತುರ್ತು ಅಧಿವೇಶನ ಕರೆಯಿರಿ ಎಂದರೆ, ಅಧಿವೇಶನ ಕರೆಯುತ್ತಿಲ್ಲ. ತಮ್ಮ ಬಣ್ಣ ಬಯಲಾಗುವ ಹೆದರಿಕೆಯಿಂದ ಅಧಿವೇಶನ ಕರೆಯುತ್ತಿಲ್ಲ. ಈಗಲಾದರೂ ಸರ್ಕಾರ ತುರ್ತು ಮುಂಗಾರು ಅಧಿವೇಶನ ಕರೆಯಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಮುಂದಿನ ಸಿಎಂ ಯಾರು ಎಂಬ ಬಗ್ಗೆ ಚರ್ಚೆ ನಡೆದಿಲ್ಲ
ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆಯಾಗುತ್ತಿಲ್ಲ. ಕಾಂಗ್ರೆಸ್ನಲ್ಲಿ ಮೂಲ ಹಾಗೂ ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ನಾನು ಹೊರಗಿನಿಂದ ಬಂದವನು ಎಂದ ಮೇಲೆ 5 ವರ್ಷ ಮುಖ್ಯಮಂತ್ರಿಯಾಗಿದ್ದೇನೆ. ನಾನು ಈಗ ಮನೆಯವನೇ, ಮುಂದಿನ ಸಿಎಂ ಯಾರಾಗಬೇಕು ಎಂಬುವುದನ್ನು ಚುನಾವಣೆ ಫಲಿತಾಂಶ ನಂತರ ಶಾಸಕರು , ಹೈಕಮಾಂಡ್ ತೀರ್ಮಾನಿಸುತ್ತಾರೆ.
ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿಯ ಮಾತು ಇಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ ಗಾದೆ ಮಾತನ್ನು ಸಿದ್ದರಾಮಯ್ಯ ಹೇಳಿದರು. 2 ತಿಂಗಳ ನಂತರ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ನೋಡಲು ಕಾರ್ಯಕರ್ತರು , ಸ್ಥಳೀಯ ನಾಯಕರು ಬೆಳಗ್ಗೆಯಿಂದಲೇ ಗುಂಪು, ಗುಂಪಾಗಿ ಅವರ ಮನೆಗೆ ಆಗಮಿಸಿದ್ದು ವಿಶೇಷವಾಗಿತ್ತು.
ಓದಿ : ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಗೊಂದಲ ವಿಚಾರ: 'ಕೈ' ನಾಯಕರಿಂದ ಮೌನವೇ ಉತ್ತರ