ಮೈಸೂರು : ಚರ್ಚ್ನ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಚರ್ಚ್ನ ಸಭಿಕರು ಮತ್ತು ಬೋಧಕರ ನಡುವೆ ಗಲಾಟೆ ನಡೆದಿದೆ.
ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿಯ ವೆಸ್ಲಿ ಚರ್ಚ್ನಲ್ಲಿ ಈ ಘಟನೆ ನಡೆದಿದೆ. ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯವರನ್ನು ಕೆಲ ಸದಸ್ಯರು ಪ್ರಶ್ನಿಸಿದ್ದರು. ಚರ್ಚ್ನ ಹಿತಾಸಕ್ತಿಗೆ ಧಕ್ಕೆ ಬರುವಂತೆ ಕೆಲಸ ಮಾಡಿದ್ದಾರೆ ಎಂದು ಅವರನ್ನು ಅಮಾನತು ಮಾಡಲಾಗಿತ್ತು. ಭಾನುವಾರ ಪ್ರಾರ್ಥನೆ ಮುಗಿದ ಬಳಿಕ, ಅಮಾನತುಗೊಳಿಸಿರುವ ಬಗ್ಗೆ ಆದೇಶ ಪತ್ರವನ್ನು ಭೋದಕರು ಓದುತ್ತಿದ್ದರು. ಈ ವೇಳೆ ಕೆರಳಿದ ಕೆಲ ಸದಸ್ಯರು, ವೇದಿಕೆಗೆ ನುಗ್ಗಿ ಬೋಧಕರ ಮೇಲೆ ಹಲ್ಲೆ ನಡೆಸಿ, ಮೈಕ್ ಕಿತ್ತುಕೊಂಡು ಗಲಾಟೆ ನಡೆಸಿದ್ದಾರೆ. ಈ ವೇಳೆ ಭೋಧಕರು ಮತ್ತು ಸಭಿಕರ ನಡುವೆ ತಳ್ಳಾಟ ನೂಕಾಟ ನಡೆದಿದೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಹಾಡಹಗಲೇ ಘರ್ಷಣೆ: ಹುಡುಗಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ!?
ಈ ಕುರಿತು ಈಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಚರ್ಚ್ನ ಸದಸ್ಯ ಸುಂದರ್ ಪ್ರೇಮ್ ಕುಮಾರ್, ಚರ್ಚ್ನ ಆಸ್ತಿ ಪಾಸ್ತಿಗಳನ್ನು ಅಕ್ರಮವಾಗಿ ಲೀಸ್ಗೆ ನೀಡಲಾಗಿದೆ. ಮಿಷನ್ ಆಸ್ಪತ್ರೆ ಸೇರಿದಂತೆ ಹಲವೆಡೆ ಹಣಕಾಸಿನ ಅವ್ಯವಹಾರಗಳನ್ನೂ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದವರ ಮೇಲೆ ಪಾಸ್ಟರೇಟ್ ಕಮಿಟಿಯವರು ಬಿಷಪ್ ಮೂಲಕ ಅಮಾನತು ಆದೇಶ ಹೊರಡಿಸಿದ್ದಾರೆ. ಅದನ್ನು ನಾವು ಪ್ರಶ್ನಿಸಿದ್ದು, ಆಗ ಗಲಾಟೆಯಾಗಿದೆ. ಸಿಎಸ್ಐ ಧರ್ಮಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು. ಕಾನೂನು ಹೋರಾಟ ನಡೆಸುತ್ತಿದ್ದೇವೆ, ಚರ್ಚ್ನ ಆಡಳಿತ ವ್ಯವಸ್ಥೆ ಸರಿಯಿಲ್ಲ. ಅದು ಸರಿಯಾಗುವವರೆಗೂ ಹೋರಾಟ ನಡೆಸುತ್ತೇವೆ. ಜೊತೆಗೆ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತ ಆಯೋಗಕ್ಕೆ ದೂರು ನೀಡಿದ್ದು, ತನಿಖೆಯಾಗಬೇಕೆಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.