ಮೈಸೂರು: ನಾಡಹಬ್ಬ ದಸರಾಗೆ ನಾಳೆ ಪುಷ್ಪಾರ್ಚನೆ ಮೂಲಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದು, ಇದಕ್ಕಾಗಿ ಚಾಮುಂಡಿ ಬೆಟ್ಟದಲ್ಲಿರುವ ಉತ್ಸವ ಮೂರ್ತಿಯನ್ನು ಸಿಂಗರಿಸಲಾಗಿದೆ.
ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಜಂಬೂ ಸವಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇರಿಸಿ ಪುಷ್ಪಾರ್ಚನೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಬೆಳಗ್ಗೆ ಶುಭ ಲಗ್ನದಲ್ಲಿ ಇದೇ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿ ಮೇಲೆ ಇಟ್ಟು ಗಣ್ಯರಿಂದ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.
ಈ ಬಗ್ಗೆ ಚಾಮುಂಡಿ ಬೆಟ್ಟದ ಅಧಿಕಾರಿ ಗೋವಿಂದ ರಾಜ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹಾಗೂ ಗಣ್ಯ ವ್ಯಕ್ತಿಗಳು ಆಗಮಿಸಿ ಮೂಲ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಅಂಬಾರಿಯಲ್ಲಿರುವ ಈ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತಾರೆ. ಬಳಿಕ ದಸರಾ ಆರಂಭವಾಗುತ್ತದೆ. ನಂತರ ಇದೇ ಉತ್ಸವ ಮೂರ್ತಿಯನ್ನು 26ನೇ ತಾರೀಖು ವಿಜಯದಶಮಿ ದಿನ ಅರಮನೆಗೆ ತೆಗೆದುಕೊಂಡು ಹೋಗಿ ಚಿನ್ನದ ಅಂಬಾರಿಯಲ್ಲಿ ಇಟ್ಟು ಮೆರವಣಿಗೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಇದನ್ನು ಅನುಸರಿಸಿ ಸಾರ್ವಜನಿಕರು ಸಹಕಾರ ನೀಡಬೇಕು. ಮನೆಯಲ್ಲೇ ಇದ್ದು ದೇವಿಯನ್ನು ಪ್ರಾರ್ಥನೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.