ಮೈಸೂರು: ಚಾಮುಂಡಿ ಬೆಟ್ಟ ನೈಸರ್ಗಿಕವಾಗಿ ಬಂದಿರುವ ಪಾರಂಪರಿಕ ಬೆಟ್ಟ, ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಆದರೆ ಪರಿಸರ ನಾಶಕ್ಕೆ ಕಾರಣವಾಗುವಂತಹ ರೋಪ್ ವೇ ನಿರ್ಮಾಣ ಚಾಮುಂಡಿ ಬೆಟ್ಟಕ್ಕೆ ಬೇಡ ಎಂದು ಹೆರಿಟೇಜ್ ಕನ್ಸರ್ವೇಶನ್ ಕಮಿಟಿಯ ಸದಸ್ಯ ಪ್ರೊ. ರಂಗರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ನೈಸರ್ಗಿಕವಾದ ಪಾರಂಪರಿಕ ಬೆಟ್ಟ, ಇದಕ್ಕೆ ಮಹಾರಾಜರುಗಳು ಕೊಡುಗೆಯನ್ನು ನೀಡಿ ಅಭಿವೃದ್ಧಿ ಮಾಡಿದ್ದಾರೆ. ಇಂತಹ ಪಾರಂಪರಿಕ ಬೆಟ್ಟವನ್ನ ಪ್ರವಾಸೋದ್ಯಮದ ಉದ್ದೇಶದಿಂದ ಅದರ ಪರಿಸರವನ್ನು ನಾಶ ಮಾಡುವಂತಹ ರೋಪ್ ವೇ ನಿರ್ಮಾಣ ಬೇಡ ಎಂದು ತಿಳಿಸಿದರು.
ಚಾಮುಂಡಿ ಬೆಟ್ಟ ಕೇವಲ ಧಾರ್ಮಿಕ ಕ್ಷೇತ್ರವಲ್ಲದೇ ಅಲ್ಲಿ ಜೀವವೈವಿಧ್ಯಮಯವಾದ ಪರಂಪರೆ ಇದೆ. ಅಲ್ಲಿ ಅನೇಕ ಪ್ರಾಣಿ, ಪಕ್ಷಗಳು ಇವೆ, ಗಿಡಮರಗಳು ಸಹ ಇವೆ. ರೋಪ್ ವೇ ಮಾಡಿದರೆ ಅವು ಉಳಿಯುವುದಾದರೂ ಹೇಗೆ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ಜೊತೆಗೆ ಚಾಮುಂಡಿ ಬೆಟ್ಟಕ್ಕೆ 5 ರಸ್ತೆಗಳಿವೆ. ಜೊತೆಗೆ ಮೆಟ್ಟಿಲುಗಳು ಸಹ ಇದ್ದು, ಅನೇಕ ಜನರು ಮೆಟ್ಟಿಲುಗಳನ್ನು ಉಪಯೋಗಿಸುತ್ತಾರೆ. ಇಷ್ಟೆಲ್ಲ ಸೌಲಭ್ಯಗಳು ಇರುವಾಗ 15 ರಿಂದ 30 ಮಂದಿ ಕೂತು ಹೋಗುವಂತಹ ಮೆಟಲ್ ರೋಪ್ ವೇ ಬೇಡ. ಇದರಿಂದ ಪ್ರಾಣಿ, ಪಕ್ಷಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದರು.
ಸ್ಥಳೀಯರ ಮತ್ತು ತಜ್ಞರ ಸಲಹೆ ಪಡೆಯದೇ ಬಜೆಟ್ನಲ್ಲಿ ರೋಪ್ ವೇಯನ್ನು ಪ್ರಸ್ತಾಪಿಸಿದ್ದಾರೆ. ಈ ಯೋಜನೆಗೆ ಹೆರಿಟೇಜ್ ಕನ್ಸರ್ವೇಶನ್ ಕಮಿಟಿ ಒಪ್ಪಿಗೆ ಕೊಡುವುದಿಲ್ಲ. ಪ್ರವಾಸೋದ್ಯಮದಿಂದ ಪ್ರಕೃತಿಗೆ ಹಾನಿಯಾಗಬಾರದು. ಸರ್ಕಾರ ಯೋಜನೆ ಜಾರಿಗೆ ತರಲು ಮುಂದಾದರೆ ಹೋರಾಟ ಮಾಡುವುದಾಗಿ ಪ್ರೊ. ರಂಗರಾಜು ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ: ನಮ್ಮ ಮೆಟ್ರೊ ರೈಲುಗಳ ಮೇಲೆ ಕಲ್ಲು ತೂರಾಟ : ಭದ್ರತಾ ಕಣ್ಗಾವಲು ಹೆಚ್ಚಿಸಿದ ಬಿಎಂಆರ್ಸಿಎಲ್