ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಮಹೋತ್ಸವ ಸಂಭ್ರಮದಿಂದ ಜರುಗಿದ್ದು, ಉತ್ಸವಕ್ಕೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಇಂದು 3ನೇ ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ರಾಜ ವಂಶಸ್ಥರಾದ ಯದುವೀರ್ ದಂಪತಿಗಳು ಆಗಮಿಸಿ ತಾಯಿಯ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ವರ್ಧಂತಿ ಉತ್ಸವದಲ್ಲಿ ಯದುವೀರ್ ದಂಪತಿ ಭಾಗವಹಿಸಿದರು. ಬೆಳಗ್ಗೆ ಮಾಜಿ ಸಚಿವರಾದ ಈಶ್ವರಪ್ಪ, ಸಂಗೀತ ನಿರ್ದೇಶಕ ಗುರುಕೀರಣ್ ಸೇರಿದಂತೆ ಹಲವರು ಚಾಮುಂಡಿ ತಾಯಿಯ ದರ್ಶನ ಪಡೆದರು.
ವರ್ಧಂತಿಯ ಹಿನ್ನೆಲೆ ಪ್ರೋಟೋಕಾಲ್ ಇರುವ ವ್ಯಕ್ತಿಗಳಿಗೆ ಮಾತ್ರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಕ್ಯಾರೆ ಎನ್ನದೇ ಭಕ್ತರು ಚಾಮುಂಡಿ ಬೆಟ್ಟಕ್ಕೆ ತೆರಳಿ ದರ್ಶನ ಪಡೆದರು.