ಮೈಸೂರು: ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ, ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ರಾಜ್ಯದಲ್ಲಿ ನಡೆದ ಉಪಚುನಾವಣೆ ದೇಶದ ತುಂಬಾ ಸುದ್ದಿಯಾಗಿತ್ತು. ಚುನಾವಣೆ ಫಲಿತಾಂಶದಿಂದ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸಿದ್ದಕ್ಕೆ ಪಕ್ಷದ ಹೈಕಮಾಂಡ್, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಉಪಚುನಾವಣೆ ವಿಚಾರವನ್ನಷ್ಟೇ ಚರ್ಚೆ ಮಾಡಿದೆ. ಚುನಾವಣೆ ಫಲಿತಾಂಶದಿಂದ ಬಿಜೆಪಿ ಸರ್ಕಾರ ಸ್ಥಿರವಾಗಿ ಉಳಿದುಕೊಂಡಿದ್ದಕ್ಕೆ ಶಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.
ರಾಜ್ಯ ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿರುವುದರಿಂದ ಬಿಜೆಪಿ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಪಕ್ಷ ಕಟ್ಟಲು ಮತ್ತಷ್ಟು ಶಕ್ತಿ ಬಂದಿದೆ. ಉಪಚುನಾವಣೆಯಲ್ಲಿ ಗೆದ್ದಿರುವ ಪಕ್ಷದ ನೂತನ ಶಾಸಕರು, ಸಚಿವ ಸ್ಥಾನದ ವಿಚಾರವಾಗಿ ಕೆಲವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಸಚಿವನಾಗಬೇಕೆಂಬ ಆಕಾಂಕ್ಷೆ ಇರುತ್ತೆ. ಆದರೆ ಈ ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲವೆಂದು ಹೇಳಿದರು.