ಮೈಸೂರು: ವ್ಯಾಪಾರದಲ್ಲಿ ನಷ್ಟ ಉಂಟಾದ ಪರಿಣಾಮ ಮನ ನೊಂದ ಬೆಂಗಳೂರಿನ ಉದ್ಯಮಿಯೊಬ್ಬರು ಮೈಸೂರಿನ ಲಾಡ್ಜ್ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಷೇರು ವ್ಯಾಪಾರಿ ಬಸವರಾಜಪ್ಪ (55) ಆತ್ಮಹತ್ಯೆ ಮಾಡಿಕೊಂಡವರು. ಇವರು ಮೂರು ದಿನಗಳ ಹಿಂದೆ ಲಾಡ್ಜ್ಗೆ ಬಂದು ವಾಸ್ತವ್ಯ ಹೂಡಿದ್ದರು. ಈ ವೇಳೆ ಡೆತ್‌ನೋಟ್ ಬರೆದಿಟ್ಟು ಸಾಯುವ ಮುನ್ನ ಮನೆಯವರಿಗೆ ವಾಟ್ಸ್‌ಆ್ಯಪ್ ಮಾಡಿದ್ದಾರೆ. ಇದನ್ನು ನೋಡಿದ ಮನೆಯವರು ಮೈಸೂರಿನಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ಸಂಬಂಧಿಕರು ಹೋಟೆಲ್‌ಗೆ ಬರುವಷ್ಟರಲ್ಲಿ ಬಸವರಾಜಪ್ಪ ಸಾವನ್ನಪ್ಪಿದ್ದರು.
ವ್ಯಾಪಾರದಲ್ಲಿ ತುಂಬಾ ನಷ್ಟ ಉಂಟಾಗಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.