ಮೈಸೂರು: ಪ್ರವಾಸಿ ಬಸ್ ಮತ್ತು ಎಲ್ಲಾ ವಾಹನಗಳ ತೆರಿಗೆ ಹಣ ಕಡಿತ ಹಾಗೂ ಬ್ಯಾಂಕ್, ಫೈನಾನ್ಸ್ ಸಾಲದ ಹಣ ಮರುಪಾವತಿ ಮಾಡಲು ಕಾಲಾವಕಾಶ ಕೋರಿ ಮೈಸೂರು ಜಿಲ್ಲಾ ಪ್ರವಾಸಿ ಬಸ್ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕೊರೊನಾದಿಂದ ನಮ್ಮ ಎಲ್ಲಾ ಪ್ರವಾಸಿ ವಾಹನಗಳ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದ್ದು, ದೇಶದಲ್ಲಿ ಪ್ರವಾಸಿ ತಾಣಗಳು ಮತ್ತು ಶುಭ ಸಮಾರಂಭಗಳಿಗೆ ನಿಷೇಧ ಹೇರಿರುವುದರಿಂದ ಪ್ರವಾಸಿ ವಾಹನದ ಮಾಲೀಕರಿಗೆ ಹಾಗೂ ಚಾಲಕರಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಆರ್ಥಿಕ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಇಂತಹ ಸ್ಥಿತಿಯಿಂದ ಹೊರ ಬರಲು ಸುಮಾರು ಎರಡು ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಆದ್ದರಿಂದ ಪ್ರವಾಸಿ ಬಸ್ಗಳ ತೆರಿಗೆ ಹಣವನ್ನು ಕನಿಷ್ಠ ಆರು ತಿಂಗಳ ಕಾಲ ಸಂಪೂರ್ಣವಾಗಿ ಕಡಿತಗೊಳಿಸಬೇಕು. ಮುಂದಿನ ಆರು ತಿಂಗಳು ತೆರಿಗೆಯನ್ನು ಶೇಕಡಾ ಅರ್ಧದಷ್ಟು ಪಾವತಿಸಿಕೊಳ್ಳಬೇಕು. ಸಾಲ ಮರುಪಾವತಿಗೆ ಬ್ಯಾಂಕ್ ಮತ್ತು ಫೈನಾನ್ಸ್ನಲ್ಲಿ ಕೊಟ್ಟಿರುವ 6 ತಿಂಗಳ ಕಾಲಾವಕಾಶ ಸಾಲದು. ಇನ್ನೂ ಮುಂದಿನ 6 ತಿಂಗಳು ಕಾಲಾವಕಾಶ ಕೊಡಬೇಕು. ಸಾಲದ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ಪಾವತಿ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.