ಮೈಸೂರು: ಬೆಳಗಾವಿಯಲ್ಲಿ ಎಂಇಎಸ್ ನಿಷೇಧಿಸುವಂತೆ ಒತ್ತಾಯಿಸಿ, ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಹಾರ್ಡಿಂಗ್ ವೃತ್ತದ ಬಳಿ ಪೊರಕೆ ಚಳವಳಿ ನಡೆಸಿದರು. ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕು. ಇಲ್ಲವಾದರೆ ಸರ್ಕಾರವೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿ, ಎಂಇಎಸ್ ಎಂದು ಬರೆದ ಭಿತ್ತಿ ಪತ್ರಕ್ಕೆ ಪೊರಕೆಯಲ್ಲಿ ಹೊಡೆದು, ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧ ಮಾಡಬೇಕು. ಇಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಾಯಕರು ಎಂಇಎಸ್ ನಿಷೇಧ ಮಾಡುತ್ತೇವೆಂದು ಹೇಳಿದ್ದರು. ಅವರಿಗೆ ಮರಾಠಿಗರ ವೋಟ್ ಬೇಕಾಗಿದೆ, ಹಾಗಾಗಿ ಇದುವರೆಗೂ ಆ ಸಮಿತಿಯನ್ನು ನಿಷೇಧಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಕನ್ನಡಿಗರ ಅವಿಭಾಜ್ಯ ಅಂಗ, ಕರ್ನಾಟಕ ಸರ್ಕಾರ ಮರಾಠಿಗರಿಗೆ ಬಗ್ಗಬಾರದು. ಮಹಾರಾಷ್ಟ್ರದ ಸಚಿವರು ನಾಡಿದ್ದು, ಬೆಳಗಾವಿಗೆ ಬರುತ್ತಿದ್ದಾರೆ. ಅವರನ್ನು ಗಡಿಯಲ್ಲೇ ಬಂಧಿಸಿ, ಬೆಳಗಾವಿಯ ಜೈಲಿನಲ್ಲಿಡಬೇಕು ಎಂದು ಆಗ್ರಹಿಸಿದರು. ಎಂಇಎಸ್ ಸಂಘಟನೆಯವರು ಕನ್ನಡಿಗರ ಮೇಲೆ ದೌರ್ಜನ್ಯವೆಸಗುತ್ತಿದ್ದರೂ, ಬೆಳಗಾವಿಯ ಜಿಲ್ಲಾ ಮಂತ್ರಿ, ಎಂಎಲ್ಎ, ಎಂಪಿಗಳು ಸುಮ್ಮನಿದ್ದಾರೆ ಎಂದು ಆರೋಪಿಸಿದರು. ಈ ಜನಪ್ರತಿನಿಧಿಗಳು ಎಂಇಎಸ್ ಅವರೊಂದಿಗೆ ಶಾಮೀಲಾಗಿದ್ದಾರೆಯೇ? ಎಂದು ಪ್ರಶ್ನಿಸಿ ಕನ್ನಡಿಗರಿಗೆ ರಕ್ಷಣೆ ನೀಡದ ಬೆಳಗಾವಿ ಜಿಲ್ಲಾ ರಾಜಕಾರಣಿಗಳು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ಬೆಳಗಾವಿಯ ಅಧಿವೇಶನಕ್ಕೂ ಮುಂಚೆ ಎಂಇಎಸ್ ಅನ್ನು ನಿಷೇಧ ಮಾಡಬೇಕು. ಬೆಳಗಾವಿಯಲ್ಲಿ ಕನ್ನಡಿಗರೇ ಬೆಳೆಯಬೇಕು, ಮರಾಠಿಗರನ್ನು ಬೆಳೆಯಲು ಬಿಡಬಾರದರು. ಕನ್ನಡವೇ ಅಲ್ಲಿ ಸಾರ್ವಭೌಮವಾಗಬೇಕು ಎಂದರು.
ಚಿರತೆ ದಾಳಿ ವಿಚಾರವಾಗಿ ಮಾತನಾಡಿ, ಚಿರತೆ ದಾಳಿಗೊಳಗಾದವರಿಗೆ 15 ಲಕ್ಷ ರೂ.ಅನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಆದರೆ ಈ ಸರಕಾರಕ್ಕೆ ಚಿರತೆಯನ್ನು ಹಿಡಿಯಲು ಆಗಲಿಲ್ಲ. ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇವರು ಜನರಿಗೆ ಯಾವ ರಕ್ಷಣೆ ಕೊಡುತ್ತಾರೆ ಎಂದು ಪ್ರಶ್ನಿಸಿ, ಚಿರತೆ ದಾಳಿಯಿಂದ ಸಾವನ್ನಪ್ಪಿದವರಿಗೆ 1ಕೋಟಿ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ನಾನಾಗಲಿ, ಜಾರಕಿಹೊಳಿ ಆಗಲಿ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಮಹೇಶ್ ಕುಮಟಳ್ಳಿ