ಮೈಸೂರು: ಕಾಂಗ್ರೆಸ್ ಬಿತ್ತಿದ ಬೀಜ ಎಸ್.ಡಿ.ಪಿ.ಐ ರೂಪದಲ್ಲಿ ಹೆಮ್ಮರವಾಗಿದೆ. ಕಾಂಗ್ರೆಸ್ನ ಪಾಪದ ಕೂಸು ಎಸ್.ಡಿ.ಪಿ.ಐ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ವರುಣ ಕ್ಷೇತ್ರಕ್ಕೆ ಪಕ್ಷ ಸಂಘಟನೆಗಾಗಿ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ, ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿದರು. ನನಗೆ ರಾಜಕೀಯದಲ್ಲಿ ಗುರುತಿಸುವಂತೆ ಮಾಡಿದ ವರುಣ ಕ್ಷೇತ್ರ ಸಂಘಟನೆ ಹಾಗೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ನಾಯಕರು ನನ್ನನ್ನು ನೇಮಿಸಿದ್ದಾರೆ. ಆ ದೃಷ್ಟಿಯಿಂದ ಇಂದು ಮೈಸೂರಿಗೆ ಆಗಮಿಸಿದ್ದೇನೆ. ಇಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿಗೆ ಯಾವುದೇ ರಾಜಕೀಯ ಉದ್ದೇಶ ಇಲ್ಲವೆಂದು ಸ್ಪಷ್ಟಪಡಿಸಿದರು.
ಈ ವೇಳೆ ಬೆಂಗಳೂರು ಗಲಭೆ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷಕ್ಕೆ ಭಾರತೀಯ ಜನತಾ ಪಕ್ಷ ಅಥವಾ ಬಿಜೆಪಿ ಸರ್ಕಾರದ ಮೇಲೆ ದೂರುವ ನೈತಿಕ ಹಕ್ಕು ಇಲ್ಲ. ಈ ಘಟನೆ ಹಿಂದೆ ನಿಮ್ಮ ಪಿತೂರಿ ಇದೆ. ಎಸ್.ಡಿ.ಪಿ.ಐ ದೊಡ್ಡ ಮಟ್ಟದಲ್ಲಿ ದುಷ್ಕೃತ್ಯಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂದರೆ ಅದಕ್ಕೆ ಕುಮ್ಮಕ್ಕು ಕೊಟ್ಟವರು ನೀವೇ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ನೂರಾರು ಕೇಸ್ಗಳನ್ನು ವಾಪಸ್ ಪಡೆದಿದ್ದು, ಈ ಘಟನೆಗಳು ಮರುಕಳಿಸಲು ಕಾರಣವಾಗಿದೆ. ಇಂತಹ ಘಟನೆಗೆ ಕಾರಣ ಗೊತ್ತಿದ್ದರು, ಕಾಂಗ್ರೆಸ್ ಪಕ್ಷ ಸತ್ಯ ಶೋಧನಾ ಕಮಿಟಿ ಮಾಡುವ ಅವಶ್ಯಕತೆ ಇರಲಿಲ್ಲ. ಈ ಘಟನೆಯಲ್ಲಿ ಭಾಗವಹಿಸುವವರು ಯಾರು ಎಂದು ನಿಮಗೆ(ಕಾಂಗ್ರೆಸ್) ಗೊತ್ತಿದೆ ಎಂದು ವಿಜಯೇಂದ್ರ ಗುಡುಗಿದರು.
ರಾಜ್ಯದಲ್ಲಿ ಗೊಂದಲ ಮೂಡಿಸಿ, ಅಶಾಂತಿ ಸೃಷ್ಟಿಸುವ ಕೆಲಸ ಕಾಂಗ್ರೆಸ್ ಪಕ್ಷ ಮತ್ತು ಎಸ್.ಡಿ.ಪಿ.ಐ ಮಾಡುತ್ತಿದೆ ಎಂದರೆ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ. ಘಟನೆಯಾದ ತಕ್ಷಣ ಪೊಲೀಸರು ನೂರಾರು ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರ ಜೊತೆಗೆ ಬೆಂಗಳೂರಿನ ಹೆಗಡೆ ನಗರದ ಎಸ್.ಡಿ.ಪಿ.ಐ ಕಚೇರಿಯಲ್ಲಿ ಮಾರಕಾಸ್ತ್ರಗಳು ದೊರಕಿದ್ದು, ಈ ಘಟನೆಗೆ ಸಂಬಂಧಿಸಿದ ಸಭೆಗಳು ಅಲ್ಲೆ ನಡೆದಿವೆ ಎನ್ನುವ ಮಾಹಿತಿ ಸಿಗುತ್ತಿದೆ. ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.