ಮೈಸೂರು: ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಸಿ.ಟಿ.ರವಿ, ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಮುಖಂಡರು ಅಬ್ಬರದ ಪ್ರಚಾರ ನಡೆಸಿದರು.
ಹುಣಸೂರು ಪಟ್ಟಣದ ರಂಗನಾಥ್ ಬಡಾವಣೆಯಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಲ್ಕುಣಿಕೆ ವೃತ್ತದವರೆಗೆ ಮೆರವಣಿಗೆ ನಡೆಸಿದ್ರು.
ಮೆರವಣಿಗೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕಟೀಲ್, ಜೆಡಿಎಸ್ ಹಾಗೂ ಕಾಂಗ್ರೆಸ್ ಮತ್ತೆ ಒಂದಾಗುತ್ತೀವಿ ಎಂದು ರಾಜ್ಯದಲ್ಲಿ ಅಪಪ್ರಚಾರ ಮಾಡುತ್ತಾ ಮತದಾರರ ದಿಕ್ಕು ತಪ್ಪಿಸಿ ಅತಂತ್ರ ಸ್ಥಿತಿ ನಿರ್ಮಿಸಲು ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದ್ರು.
ಬಿಜೆಪಿ ಹಣ ಹಂಚಿಕೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಅವರು ಹಣ ಹಂಚಿಕೆ ಅಧಿಕಾರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡಿ ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ತಿಹಾರ್ ಜೈಲಿಗೆ ಹೋಗಿ ಯಾರು ರಾಜ್ಯದ ಮಾನ ಎತ್ತಿ ಹಿಡಿದರು? ಎಂಬುವುದನ್ನು ಕಾಂಗ್ರೆಸ್ಸಿಗರು ಮನನ ಮಾಡಿಕೊಳ್ಳಲಿ ಎಂದು ಅವರು ವ್ಯಂಗ್ಯವಾಡಿದ್ರು.