ಮೈಸೂರು: ಚುನಾವಣೆಯ ನಂತರ ಸರ್ಕಾರವನ್ನು ಕಿತ್ತು ಹಾಕೋಕೆ ಅದೇನು ಗೋಲಿ ಆಟವೇ? ಬಿಜೆಪಿ ಅವರಿಗೆ ಸೆನ್ಸ್ ಇಲ್ಲ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇಂದು ಅವರ ಮನೆಯ ಹತ್ತಿರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಚುನಾವಣೆಯ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪದೇ ಪದೇ ಹೇಳುವ ಬಗ್ಗೆ ಕೋಪದಿಂದಲೇ ಪ್ರತಿಕ್ರಿಯಿಸಿದದರು. ಯಡಿಯೂರಪ್ಪ ಎಷ್ಟು ದಿನಗಳಿಂದ ಇದೇ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ನನಗಿಂತ ಮೊದಲಿಂದಲೂ ಈ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ಅವರ ಕೈಯಲ್ಲಿ ಸರ್ಕಾರವನ್ನು ಕಿತ್ತು ಹಾಕಲು ಆಗಿದೆಯಾ? ಅದೇನು ಗೋಲಿ ಆಟವೇ? ಅವರಿಗೆ ಸೆನ್ಸ್ ಇಲ್ಲ ಅಷ್ಟೇ. ಮೂವತ್ತು ಕೋಟಿ ಖರ್ಚು ಮಾಡಿ ಎಂಎಲ್ಎಗಳನ್ನು ಕೊಂಡುಕೊಳ್ಳಲು ಆಗುತ್ತಾ? ಬಿಜೆಪಿ ಅವರಿಗೆ ಮಾನ ಮಾರ್ಯಾದೆ ಇಲ್ಲ. ಬುದ್ಧಿನೂ ಇಲ್ಲ. ಅದೊಂದು ಪೊಲಿಟಿಕಲ್ ಪಾರ್ಟಿನಾ, ಅವರೊಬ್ಬ ಲೀಡರಾ ಎಂದು ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.
ಲೋಕಸಭೆ ಗೆದ್ದರೆ ನನ್ನ ರಾಜಕೀಯ ಮುಗಿಯುತ್ತದೆ ಎಂಬ ಯಡಿಯೂರಪ್ಪರ ಹೇಳಿಕೆಗೆ ಪ್ರತಿಕ್ತಿಯಿಸಿ, ಅವರು ಏನಾದರೂ ಮಾತನಾಡಲಿ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಜನರು ಬುದ್ಧಿವಂತರಿದ್ದಾರೆ. ಅವರಿಗೆ ಇವರು ಮಾಡುತ್ತಿರುವ ಯೋಜನೆಗಳ ಬಗ್ಗೆ ಅರಿವಿದೆ. ನಾವು ತಿಳಿದುಕೊಂಡಿದ್ದೀವಿ ಅವರು ಪದ್ದರು ಅಂತ. ನಮಗಿಂತ ಬುದ್ಧಿವಂತರು ಅವರು ಎಂದರು.
ಸಿದ್ದು ಯು ಟರ್ನ್:
ನಿನ್ನೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಇಂದು ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲುವುದಿಲ್ಲ. ಇನ್ನೂ ನಾಲ್ಕು ವರ್ಷ ಇದೆ. ಯೋಚನೆ ಮಾಡುತ್ತೇನೆ ಎಂದರು.
ಐಟಿ ಕಚೇರಿಯ ಮುಂದೆ ಪ್ರತಿಭಟನೆಗೆ ಸಂಬಂಧಿಸಿದಂತೆ ನನಗೂ ನೋಟಿಸ್ ಬಂದಿದೆ. ಉತ್ತರ ನೀಡಲು 15 ದಿನಗಳ ಕಾಲಾವಕಾಶ ಕೇಳಿದ್ದೇನೆ. ಇನ್ನೂ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ವೈನಾಡು ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ಅವರ ಮಾತು ಪ್ರಧಾನಮಂತ್ರಿಯ ರೀತಿಯಲ್ಲಿ ಇಲ್ಲ. ಸಂತೆಯಲ್ಲಿ ನಿಂತು ವ್ಯಾಪಾರ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.