ಮೈಸೂರು: ಹುಟ್ಟುಹಬ್ಬದ ದಿನದಂದೇ ತನ್ನ ಸ್ನೇಹಿತರಿಂದಲೇ ಹತ್ಯೆಯಾದ ನಗರ ಬಿಜೆಪಿ ಸ್ಲಂ ಮೋರ್ಚಾದ ಉಪಾಧ್ಯಕ್ಷನ ಕೊಲೆಗೆ ಕಾರಣ ಏನೆಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಇಲ್ಲಿನ ಜನತಾನಗರದ ನಿವಾಸಿ ಎಸ್.ಆನಂದ್, ಕೆ.ಆರ್.ಮೊಹಲ್ಲಾದ ಬಿಜೆಪಿ ಸ್ಲಂ ಮೋರ್ಚಾದ ಉಪಾಧ್ಯಕ್ಷನಾಗಿ ಕೆಲ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಂಡಿದ್ದ. ಜೊತೆಗೆ ಸಣ್ಣಪುಟ್ಟ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದನಂತೆ. ಇತ್ತೀಚೆಗೆ ಆತ ತನ್ನ ಹುಟ್ಟುಹಬ್ಬವನ್ನು ಚಾಮುಂಡಿ ಬೆಟ್ಟದ ಹಿಂಭಾಗವಿರುವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ. ಬಳಿಕ ಅಲ್ಲಿಂದ ಊಟ ಮಾಡಿ 6 ಜನ ಸ್ನೇಹಿತರ ಜೊತೆ ಕುವೆಂಪುನಗರದ ಸರ್ವಿಸ್ ಅಪಾರ್ಟ್ಮೆಂಟ್ಗೆ ಆಗಮಿಸಿದ್ದರು.
ಬರ್ತ್ ಡೇ ದಿನವೇ ಕೊಲೆಗೆ ಸ್ಕೆಚ್ ಹಾಕಿದ್ದ ಸ್ನೇಹಿತರು:
ಈ ಹಿಂದೆ ಕೊಲೆ ಕೇಸೊಂದರಲ್ಲಿ ಆನಂದ್ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿದ್ದ. ಅಷ್ಟೇ ಅಲ್ಲದೆ, ಸರಸ್ವತಿ ಪುರಂ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಸಹ ಆಗಿರುವ ಈತ 4 ದಿನದ ಹಿಂದೆ ಸ್ನೇಹಿತ ಬಸವರಾಜ್ ಎಂಬಾತನೊಂದಿಗೆ ಜಗಳ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೆ, ಬಸವರಾಜ್ನನ್ನು ಓವರ್ ಟೇಕ್ ಮಾಡಿ ಸ್ನೇಹಿತರ ಎದುರೇ ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಇದನ್ನೇ ದ್ವೇಷವಾಗಿಟ್ಟುಕೊಂಡ ಬಸವರಾಜ್, ಸುರೇಶ್, ಗಿರಿ, ಮಂಜ ಹಾಗೂ ಕೆಲ ಪುಡಿರೌಡಿಗಳು ಆತನ ಬರ್ತ್ಡೇ ದಿನ ಅಪಾರ್ಟ್ಮೆಂಟ್ನಲ್ಲಿ ಕಂಠಪೂರ್ತಿ ಕುಡಿದು ಆನಂದ್ಗೆ ಬಿಯರ್ ಬಾಟಲ್ ಹೊಡೆದು, ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾರೆ.
ಈ ಘಟನೆ ನಡೆಯುವ ಮುನ್ನವೇ ಪರಮೇಶ್ ಹಾಗೂ ಕೃಷ್ಣ ಎಂಬಿಬ್ಬರು ಅಪಾರ್ಟ್ಮೆಂಟ್ನಿಂದ ನಿರ್ಗಮಿಸಿದ್ದರು ಎನ್ನಲಾಗಿದೆ. ಸದ್ಯ ಕೊಲೆ ಮಾಡಿದ್ದ ಬಸವರಾಜ್ನನ್ನು ಪೊಲೀಸರು ಬಂಧಿಸಿದ್ದು ಉಳಿದವರಿಗಾಗಿ ಬಲೆ ಬೀಸಿದ್ದಾರೆ.