ಮೈಸೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿಯವರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಗ್ರಾಮ ವಾಸ್ತವ್ಯದ ಬಿಜೆಪಿ ಟೀಕೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.
ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿಯವರ ಧೋರಣೆಯನ್ನು ಖಂಡಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬ ಬಗ್ಗೆ ಏನೂ ಹೇಳುವುದಿಲ್ಲ. ಬದಲಾಗಿ ವಾಮಮಾರ್ಗದಿಂದ ರಾಜ್ಯದಲ್ಲಿ ಅಧಿಕಾರವನ್ನು ಹೇಗೆ ಹಿಡಿಯಬೇಕು ಎಂಬ ಬಗ್ಗೆ ಬಿಜೆಪಿಯವರು ಪ್ರತಿದಿನವು ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಯವರ ಸರ್ಟಿಫಿಕೇಟ್ ಮತ್ತು ಮಾರ್ಗದರ್ಶನ ನಮಗೆ ಬೇಕಿಲ್ಲ. ಅದರ ಅನಿವಾರ್ಯತೆಯೂ ನಮಗೆ ಇಲ್ಲ. ಗ್ರಾಮ ವಾಸ್ತವ್ಯದಿಂದ ಏನು ಕೆಲಸ ಆಗುತ್ತದೆ ಎಂದು ಜನ ತಿರ್ಮಾನ ಮಾಡ್ತಾರೆ ಎಂದರು.
ಜನರ ಹತ್ತಿರ ಸರ್ಕಾರವನ್ನು ತೆಗೆದುಕೊಂಡು ಹೋಗಬೇಕು. ಅವರ ಕೆಲಸವನ್ನು ಅಲ್ಲೇ ಮಾಡಬೇಕು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿದ್ದು, ಅದಕ್ಕಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇಂತಹ ಒಳ್ಳೆಯ ಕೆಲಸವನ್ನು ಬಿಜೆಪಿಯವರು ಪ್ರಶಂಸೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.