ಮೈಸೂರು: ಕಳ್ಳತನಕ್ಕೆ ಕಡಿವಾಣ ಹಾಕಲು ಸಾಮಾನ್ಯವಾಗಿ ಜುವೆಲ್ಲರಿ ಶಾಪ್, ಬಟ್ಟೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಾಪಾರಿ ತನ್ನ ಅಂಗಡಿಯಲ್ಲಿರುವ ವೀಳ್ಯದೆಲೆಗಳನ್ನು ರಕ್ಷಿಸಿಕೊಳ್ಳಲು ಅಂಗಡಿ ಸುತ್ತ 5 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.
ದೇವರಾಜ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ವೀಳ್ಯದೆಲೆ ಹಾಗೂ ಹೊಂಬಾಳೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ವ್ಯಾಪಾರಿ ಲೋಕೇಶ್ ಅವರ ಅಂಗಡಿಯಲ್ಲಿ ವ್ಯಾಪಾರಕ್ಕೆಂದು ಬರುವ ಮತ್ತು ಸುತ್ತಮುತ್ತಲ ಅಂಗಡಿಗಳಿಗೆ ಭೇಟಿ ನೀಡುವ ಕೆಲವು ಗ್ರಾಹಕರು ಹಾಗೂ ಜನರು ವೀಳ್ಯದಲೆ ಮತ್ತು ಹೊಂಬಾಳೆಗಳನ್ನು ಕದ್ದುಕೊಂಡು ಹೋಗುತ್ತಿದ್ದರು. ಇದರಿಂದ ಬೇಸತ್ತ ಲೋಕೇಶ್ ತಮ್ಮ ವ್ಯಾಪಾರದ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.
ಬಂಡವಾಳ ಜಾಸ್ತಿ: "ವೀಳ್ಯದೆಲೆ ಹಾಗೂ ಹೊಂಬಾಳೆಗೆ ಅಧಿಕ ಬಂಡವಾಳ ಹಾಕಬೇಕು. ಗೃಹಪ್ರವೇಶ, ಮದುವೆ ಇತರೆ ಶುಭ ಸಮಾರಂಭಗಳಿಗೆ ತೆಗೆದುಕೊಂಡು ಹೋಗಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ. ವಸ್ತುಗಳನ್ನು ತೆಗೆದುಕೊಂಡು ಹಣ ಕೊಟ್ಟು ಹೋದರೆ ಪರವಾಗಿಲ್ಲ. ಕೆಲವರು ವೀಳ್ಯದೆಲೆ ಮತ್ತು ಹೊಂಬಾಳೆಗಳನ್ನು ಕದ್ದುಕೊಂಡು ಹೋಗುತ್ತಿದ್ದರು. ಇದರಿಂದ ನಷ್ಟ ಅನುಭವಿಸಬೇಕಾಗುತ್ತಿತ್ತು" ಎಂದು ವ್ಯಾಪಾರಿ ಲೋಕೇಶ್ ಹೇಳಿದ್ದಾರೆ.
"ಮುಂಗಾರು ಹಾಗೂ ಹಿಂಗಾರು ಮಳೆ ಕಡಿಮೆಯಾಗಿರುವುದರಿಂದ, ವೀಳ್ಯದೆಲೆ ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ ಬರುತ್ತಿಲ್ಲ. ಅಲ್ಲದೇ, ಒಮ್ಮೊಮ್ಮೆ ಎಲೆಗಳಿಗೆ ರೋಗ ತಗುಲಿದರೆ ಎಲೆಗಳು ಸಿಗುವುದಿಲ್ಲ. ಸಮಸ್ಯೆಗಳ ನಡುವೆ ನಾವು ವ್ಯಾಪಾರ ಮಾಡುತ್ತಿರುತ್ತೇವೆ. ಇದನ್ನರಿಯದ ಕೆಲವರು ಕಳ್ಳತನ ಮಾಡಿಕೊಂಡು ಹೋಗುತ್ತಾರೆ. ಇದೀಗ ಸಿಸಿಕ್ಯಾಮರಾ ಅಳವಡಿಸಿದ್ದು ವೀಳ್ಯದೆಲೆ ಹಾಗೂ ಹೊಂಬಾಳೆ ಕಳ್ಳತನ ಕಡಿಮೆಯಾಗಿದೆ" ಎಂದರು.
ದೇವರಾಜ ಮಾರುಕಟ್ಟೆಯಲ್ಲಿ ಇಂದಿಗೂ ಅನೇಕ ಅಂಗಡಿಗಳ ವ್ಯಾಪಾರಿಗಳು ಸಿಸಿ ಕ್ಯಾಮರಾಗಳ ಮೊರೆ ಹೋಗಿಲ್ಲ. ಆದರೆ ವೀಳ್ಯದೆಲೆ ಅಂಗಡಿಯಲ್ಲಿ ಮಾತ್ರ ಸಿಸಿ ಕ್ಯಾಮರಾ ಕಂಡು ಜನ ದಂಗಾಗಿದ್ದಾರೆ.
ಅಡಿಕೆ ತೋಟಕ್ಕೆ ಶ್ವಾನ, ಸಿಸಿಟಿವಿ ರಕ್ಷಣೆ: ದಾವಣಗೆರೆಯಲ್ಲಿ ರೈತನೊಬ್ಬ ಅಡಿಕೆ ತೋಟದ ರಕ್ಷಣೆಗಾಗಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಅಡಿಕೆಗೆ ಉತ್ತಮ ಬೆಲೆ ಇರುವುದರಿಂದ ಕಳ್ಳರ ಕಾಟ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಿಸಿ ಕ್ಯಾಮರಾ ಮತ್ತು ಶ್ವಾನದ ಮೊರೆ ಹೋಗಿದ್ದರು. ತೋಟಕ್ಕೆ ಯಾರೇ ಕಾಲಿಟ್ಟರೂ ಸಿಸಿ ಕ್ಯಾಮರಾದಿಂದ ಮಾಲೀಕನ ಮೊಬೈಲ್‌ಗೆ ಸಂದೇಶ ರವಾನೆಯಾಗುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಅಡಿಕೆ ಕಳ್ಳರಿಗೆ ಮಟ್ಟ ಹಾಕಲು ತೋಟದಲ್ಲಿ ಸಿಸಿಟಿವಿ, ಶ್ವಾನದ ಸಹಾಯ: ರೈತನ ಹೊಸ ಉಪಾಯ