ಮೈಸೂರು: ಬೆಂಗಳೂರು- ಮೈಸೂರು ನಡುವಿನ ಮೊದಲ ಹಂತದ ಟೋಲ್ ಸಂಗ್ರಹ ಸೋಮವಾರದಿಂದ ಆರಂಭವಾಗಬೇಕಿತ್ತು. ಆದರೆ ಸರ್ವೀಸ್ ರೋಡ್ಗಳ ಕಾಮಗಾರಿ ಪೂರ್ಣಗೊಂಡಿಲ್ಲದ ಕಾರಣ, ಈ ಸರ್ವೀಸ್ ರಸ್ತೆಗಳು ಪೂರ್ಣಗೊಂಡ ನಂತರ ಟೋಲ್ ಸಂಗ್ರಹವನ್ನು ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು- ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇ ಮಾರ್ಚ್ 11 ರಂದು ಉದ್ಘಾಟನೆ ಆಗಲಿದೆ. ಅದಕ್ಕೂ ಮುನ್ನ ಸೋಮವಾರದಿಂದ ಮೊದಲ ಹಂತದ ಟೋಲ್ ಸಂಗ್ರಹವನ್ನು ಆರಂಭಿಸುವ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಇನ್ನೂ ಸಂಪೂರ್ಣ ಕಾಮಗಾರಿ ಮುಗಿದಿಲ್ಲ, ಅಗಲೇ ಟೋಲ್ ಸಂಗ್ರಹ ಆರಂಭಿಸುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಪೂರ್ಣಗೊಳಿಸಿ ಆನಂತರ ಟೋಲ್ ಸಂಗ್ರಹವನ್ನು ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್ ಪೇಜ್ನಲ್ಲಿ ತಿಳಿಸಿದ್ದಾರೆ.
ಡಿಕೆಶಿ ವಿರೋಧ : ಕಳೆದ ವಾರ ಮೈಸೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬೆಂಗಳೂರು- ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಗೆ ಟೋಲ್ ಸಂಗ್ರಹ ಮಾಡುವ ಮುನ್ನ, ಸರ್ವೀಸ್ ರಸ್ತೆಗಳನ್ನು ಮಾಡಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ. ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ದೇವೇಗೌಡರಿಗೆ ತಮ್ಮ ಕೊನೆ ದಿನದಲ್ಲೂ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂಬ ಹಂಬಲ: ಹೆಚ್ಡಿಕೆ
ಟೋಲ್ ಸಂಗ್ರಹ ಶುಲ್ಕ: ರಾಷ್ಟ್ರೀಯ ಹೆದ್ದಾರಿ 275 ಭಾಗದ ಕಿ.ಮೀ 18,000 ದಿಂದ 74,200 ಕಣಿಮೀಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಬೆಂಗಳೂರು- ನಿಡಘಟ್ಟ ವಿಭಾಗದ 6 ಲೇನ್ ಬಳಕೆಗಾಗಿ ಟೋಲ್ ಸಂಗ್ರಹ ಸೋಮವಾರದಿಂದ ಜಾರಿಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಿಳಿಸಿತ್ತು. ಸೋಮವಾರ ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹ ಅನ್ವಯವಾಗಲಿದೆ ಎಂದು ಹೇಳಿತ್ತು.
ಕಾರು/ಜೀಪು/ವ್ಯಾನ್ಗಳ ಏಕಮುಖ ಸಂಚಾರಕ್ಕೆ 135 ರೂ., ಅದೇ ದಿನ ಮರು ಸಂಚಾರಕ್ಕೆ 205 ರೂ., ಒಂದೇ ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ 4525 ರೂ., ಬಸ್ ಅಥವಾ ಟ್ರಕ್ ಏಕಮುಖ ಸಂಚಾರಕ್ಕೆ 460 ರೂ., ಅದೇ ದಿನ ಮರು ಸಂಚಾರಕ್ಕೆ 690 ರೂ., ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ 15,325 ರೂ., ಲಘ ವಾಣಿಜ್ಯ ವಾಹನಗಳು, ಮೂರು ಅಕ್ಸೆಲ್ ವಾಣಿಜ್ಯ ವಾಹನಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ವಿವಿಧ ದರಗಳನ್ನು ನಿಗದಿಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಇದೀಗ ಟೋಲ್ ಸಂಗ್ರಹ ಮುಂದೂಡಿಕೆಯಾಗಿದ್ದು, ನಿಗದಿಯಾಗಿರುವ ಶುಲ್ಕಗಳಲ್ಲಿ ಬದಲಾವಣೆಯಾಗಲಿದೆಯೇ? ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮೋದಿ: ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ₹16 ಸಾವಿರ ಕೋಟಿ ಬಿಡುಗಡೆ