ಮೈಸೂರು: ಹಿಂದಿನ ಸಂಗೀತ ಕಲಾವಿದರಿಗೆ ಸಂಗೀತದ ಬಗ್ಗೆ ಇದ್ದ ಕಾಳಜಿ ಈಗ ಇದೆಯೇ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ (Pandit Rajeev Taranath) ತಿಳಿಸಿದರು.
ಬಸವ ಕೇಂದ್ರದ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದಿಂದ ಕೊಡಮಾಡುವ 'ಬಸವಶ್ರೀ ಪ್ರಶಸ್ತಿ' (Basavashree Award) ಪಡೆದ ನಂತರ ಅವರು ಮಾತನಾಡಿದರು. ನಾನು ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ನಂತರ ಖ್ಯಾತ ವಿದ್ವಾಂಸರ ಜೊತೆ ವೇದಿಕೆ ಹಂಚಿಕೊಂಡ ಸುಯೋಗ ನನಗೆ ದೊರಕಿದೆ. ಆದರೆ ಅವರು ಬಯಸಿದಂತ ಸಂಗೀತ, ಅವರಿಗೆ ಸಂಗೀತದ ಬಗ್ಗೆ ಇದ್ದ ಕಾಳಜಿ ಈಗ ಇದೆಯೇ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ, ಕನ್ನಡಮ್ಮ ಎಲ್ಲಾ ಸಂಗೀತವನ್ನು ತನ್ನದಾಗಿ ಮಾಡಿಕೊಂಡಿದ್ದಾಳೆ. ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಸೇರಿದಂತೆ ಎಲ್ಲಾ ಸಂಗೀತವನ್ನು ನಮ್ಮ ರಾಜ್ಯದಲ್ಲಿ ಇದೆ. ಬೇರೆ ರಾಜ್ಯದಲ್ಲಿ ಕಾಣಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಎಲ್ಲಾ ರೀತಿಯ ಎಲ್ಲಾ ಕಲೆಗಳನ್ನು ಬೆಳೆಸಿದ್ದಾರೆ ಎಂದರು.
ಹಿಂದಿನ ಆದರ್ಶ, ಗಮ್ಯ, ಉದ್ದೇಶ ಮತ್ತೆ ನೆನಪಿಗೆ ಬರುತ್ತದೆ. ಮುಂದಿನ ವರ್ಷ ನನಗೆ 90 ವರ್ಷವಾಗಲಿದ್ದು, ಪಂಡಿತ್ ತಾರಾನಾಥರ ಮಗನಾಗಿ ಜನಿಸಿ, ಗುರು ಅಲಿ ಅಕ್ಬರ್ ಖಾನ್ ಅವರ ಆಶೀರ್ವಾದದಿಂದ ಬೆಳೆದು ಸಂಗೀತ ಕಲಿತೆ. ಮಂದಿ ಸಂಗೀತವನ್ನು ಕೇಳುತ್ತಿದ್ದಾರೆ. ಈಗ ಬಸವಶ್ರೀ ಪ್ರಶಸ್ತಿ ನೀಡಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ಕೊಟ್ಟಿದ್ದೀರಿ. ಅದಕ್ಕೆ ನಾನು ಅರ್ಹನಾಗಿರುವುದಕ್ಕೆ ಸಂತಸವಿದೆ. ಉಳಿದಿರುವ ಬದುಕಲ್ಲಿ ಸಾರ್ಥಕಥೆ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಪ್ರದಾನಿಸಿ ಮಾತನಾಡಿದ ಮುರುಘಾ ಶರಣರು, ಡಾ.ಶ್ರೀ. ಶಿವಮೂರ್ತಿ ಅವರು, ಬಸವಶ್ರೀ ಪ್ರಶಸ್ತಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯಾಗಿದ್ದು, ಪ್ರತಿವರ್ಷ ಪ್ರತಿಭಾವಂತರನ್ನು ಗುರುತಿಸಿ, ಮಾನವೀಯತೆ, ಮಹತ್ತರ ಸಾಧನೆ, ರಾಷ್ಟ್ರೀಯ ಕೊಡುಗೆ ನೀಡಿದವರಿಗೆ ಪ್ರದಾನ ಮಾಡುತ್ತೇವೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಾಗೂ ಕರ್ನಾಟಕಕ್ಕೆ ಹೆಸರು ತಂದುಕೊಟ್ಟ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದರು. ಬಸವಶ್ರೀ ಪ್ರಶಸ್ತಿಯ ಮೌಲ್ಯವನ್ನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದು, ಯಾವ ಒತ್ತಡಕ್ಕೂ ಒಳಗಾಗಿಲ್ಲ. ಇದೊಂದು ಜಾತಿ, ವರ್ಗ ಮೀರಿದ ಪ್ರಶಸ್ತಿ ಎಂದರು.
ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದಿಂದ ಪ್ರಶಸ್ತಿ ನೀಡುತ್ತಿದ್ದು, ಇಂತಹ ನೂರಾರು ಕಾರ್ಯಕ್ರಮ ಮಾಡುವ ಅವಕಾಶ ಅವರಿಗೆ ದೊರಕಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 'ಪಂಡಿತ್ ರಾಜೀವ್ ತಾರಾನಾಥ್ ಸರೋದ್ ಸ್ವರಯಾನ' ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಜಿ.ಹೇಮಂತ್ ಕುಮಾರ್, ಮಹಾ ಪೌರರಾದ ಸುನಂದಾ ಪಾಲನೇತ್ರ ಉಪಸ್ಥಿತರಿದ್ದರು.
ಇದನ್ನೂ ಓದಿ:ಮೈಸೂರಿನ ಸುಧರ್ಮ ಸಂಸ್ಕೃತ ಪತ್ರಿಕೆಯ ಕೆ.ಎಸ್.ಜಯಲಕ್ಷ್ಮಿಗೆ 'ಪದ್ಮಶ್ರೀ' ಗೌರವ