ಮೈಸೂರು: ಮಾಜಿ ಸಚಿವ ಸಿ. ಹೆಚ್. ವಿಜಯ್ ಶಂಕರ್ ಮರಳಿ ಬಿಜೆಪಿ ಪಕ್ಷಕ್ಕೆ ಬರಲು ಮಾತುಕತೆ ನಡೆದಿದೆ ಎಂದು ಸ್ವತಃ ಅವರೇ ಈಟಿವಿ ಭಾರತ್ ಕ್ಕೆ ದೂರವಾಣಿ ಮೂಲಕ ಖಚಿತಪಡಿಸಿದ್ದಾರೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಥಳೀಯ ನಾಯಕರೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಬಿಜೆಪಿ ತೊರೆದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸಿ.ಹೆಚ್ .ವಿಜಯ ಶಂಕರ್ ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಸಹ ಆಗಿದ್ದರು. ಆದರೆ ಮೂಲತಃ ಬಿಜೆಪಿಯವರಾದ ವಿಜಯ್ ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು.
ಬಿಜೆಪಿಯ ಬೆಂಗಳೂರಿನ ಹಿರಿಯ ಮುಂಖಡರಾದ ಸಿ ಎಂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಿರಿಯ ಆರ್.ಎಸ್. ಎಸ್ ಮುಖಂಡರನ್ನು ವಿಜಯ್ ಶಂಕರ್ ಭೇಟಿಯಾಗಿ ಮರಳಿ ಬಿಜೆಪಿಗೆ ಬರುವ ಆಶಯವನ್ನು ಹೊರಹಾಕಿದ್ದಾರೆ. ಇತ್ತ ಬಿಜೆಪಿ ನಾಯಕರು ಸಹ ಸಿ.ಹೆಚ್. ವಿಜಯ್ ಶಂಕರ್ ಅವರನ್ನು ಪಕ್ಷಕ್ಕೆ ಪುನಃ ಕರೆದುಕೊಳ್ಳಲು ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.
ಮಾಜಿ ಸಚಿವ ಹೇಳೋದೇನು?
ಬಿಜೆಪಿಗೆ ಪುನಃ ಮರಳಲು ಈಗಾಗಲೇ ಮಾತುಕತೆ ನಡೆದಿರುವುದು ಸತ್ಯ. ಆದರೆ ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಹುಣಸೂರು ಹಾಗೂ ಪಿರಿಯಾಪಟ್ಟಣದ ಹಿರಿಯ ಮುಂಖಡರ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ ಎಂದರು.
ಇನ್ನೆರಡು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿಯಾಗಿ ಬಿಜೆಪಿ ಪಕ್ಷವನ್ನು ಸೇರುವ ಬಗ್ಗೆ ತೀರ್ಮಾನ ಕೈಗೊಳ್ಳತ್ತೇನೆ ಎಂದು ಸ್ವತಃ ಸಿ ಹೆಚ್ ವಿಜಯ್ ಶಂಕರ್ ಈಟಿವಿ ಭಾರತ್ಗೆ ದೂರವಾಣಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸ್ವತಃ ಮುತುವರ್ಜಿ ವಹಿಸಿ ಇವರನ್ನು ಕರೆತಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ತವರಿನಲ್ಲಿ ಮುಖಭಂಗ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.