ಮೈಸೂರು: ಬಿ ಎಸ್ ಯಡಿಯೂರಪ್ಪ ಮತ್ತು ನನ್ನನ್ನು ಪಂಚಮಸಾಲಿ ಲಿಂಗಾಯಿತರ ವಿರೋಧಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರು ಪಂಚಮಸಾಲಿ ಮೀಸಲಾತಿ ವಿರೋಧಿ ಎಂದು ಯಾರೋ ರಾಜಕೀಯ ಕಾರಣಕ್ಕೆ ಸ್ವಾಮೀಜಿಗಳ ತಲೆ ಕೆಡಿಸಲಾಗಿದೆ. ಅವರ ವಿರುದ್ಧ ಸ್ವಾಮೀಜಿಗಳು ಮಾತನಾಡುವಂತೆ ತಂತ್ರ ರೂಪಿಸಿದ್ದಾರೆ. ಈ ವಿಚಾರದಲ್ಲಿ ನನ್ನ ಹೆಸರು ಕೇಳಿಬರುತ್ತಿದೆ ಎಂದರು.
ಯಡಿಯೂರಪ್ಪ ಸಿಎಂ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಮೀಸಲಾತಿ ನೀಡಬಾರದು ಎಂದು ಯಾವತ್ತೂ ಒತ್ತಡ ಹೇರಿಲ್ಲ. ಯಡಿಯೂರಪ್ಪ ಎಂದಿಗೂ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಐಸಿಸ್ ನಂಟಿನ ಬಗ್ಗೆ ವಿಜಯೇಂದ್ರ ಹೇಳಿದ್ದೇನು?: ಶಿವಮೊಗ್ಗದಲ್ಲಿ ಐಸಿಸ್ ನಂಟು ಹೊಂದಿರುವ ಇಬ್ಬರು ಯುವಕರನ್ನು ಬಂಧಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಶಿವಮೊಗ್ಗದಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಕಂಡು ಬರುತ್ತಿದೆ. ಉತ್ತಮ ಶಿಕ್ಷಣ ಪಡೆದವರೆ ಐಸಿಸ್ ಉಗ್ರರ ಸಂಪರ್ಕ ಹೊಂದಿರುವುದು ಉತ್ತಮ ಬೆಳವಣಿಗೆ ಅಲ್ಲ. ಇದರ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಧ್ವನಿ ಎತ್ತಬೇಕು ಎಂದರು.
ರಾಜ್ಯದಲ್ಲಿ ಶಾಂತಿ ಕದಡುವ ಯತ್ನ: ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕವಾಗಿದ್ದು, ಅದರ ಶಾಂತಿ ಕದಡುವ ಕುತಂತ್ರಗಳು ನಡೆಯುತ್ತಿವೆ. ಅಂತಹ ಶಾಂತಿ ವಾತಾವರಣ ಹಾಳು ಮಾಡಲು ಆಗುವುದಿಲ್ಲ. ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರು ಇರುವ ಜಾಗದಲ್ಲಿ ಸಾವರ್ಕರ್ ಭಾವಚಿತ್ರ ಏಕೆ ಹಾಕಬೇಕು ಎಂದು ಹೇಳಿಕೆ ನೀಡಿದ್ದು, ಇದು ಒಂದು ಸಮುದಾಯದ ಓಲೈಕೆಗೆ ಮೀಸಲಿಟ್ಟು, ರಾಜ್ಯದಲ್ಲಿ ಶಾಂತಿ ಕದಡುವ ಯತ್ನವಾಗಿದೆ. ಇವೆಲ್ಲಾ ಚುನಾವಣಾ ಪೂರ್ವವಾಗಿ ನಡೆಯುವ ಸಹಜ ಕ್ರಿಯೆಗಳು ಎಂದು ತಿಳಿಸಿದರು.
ಚುನಾವಣಾ ತಯಾರಿ ಬಗ್ಗೆ ಹೇಳಿದ್ದೇನು?: ಚುನಾವಣಾ ತಯಾರಿ ಇನ್ನು ಮುಂದೆ ಆರಂಭ ಮಾಡಬೇಕು. ಚುನಾವಣಾ ಉದ್ದೇಶದಿಂದ ರಾಜ್ಯ ಉಪಾಧ್ಯಕ್ಷನಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಹೇಳಿದರು.
ನಾನು ಎಲ್ಲೇ ಚುನಾವಣೆಗೆ ಸ್ಪರ್ಧೆ ಮಾಡಿದರೂ ಹಳೆ ಮೈಸೂರು ಭಾಗವನ್ನು ಎಂದಿಗೂ ಮರೆಯುವುದಿಲ್ಲ. ನನಗೆ ರಾಜಕೀಯ ಶಕ್ತಿ ಕೊಟ್ಟಿರುವುದು ಮತ್ತು ಪಕ್ಷ ಸಂಘಟನೆಗೆ ಬಲ ತಂದಿದ್ದು ಇಲ್ಲೇ. ಹಾಗಾಗಿ, ಇಲ್ಲಿ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಓದಿ: ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಮತಾಂತರ ನಿಷೇಧ ಕಾಯ್ದೆಗೆ ವಿಧಾನಸಭೆ ಅಂಗೀಕಾರ