ಮೈಸೂರು: ಶರನ್ನವರಾತ್ರಿಯ 9ನೇ ದಿನ ರಾಜವಂಶಸ್ಥರು ರಾಜ ಪರಂಪರೆಯಂತೆ ಇಂದಿಗೂ ಆಯುಧ ಪೂಜಾ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು, ಅಕ್ಟೋಬರ್ 04 ರಂದು ಅರಮನೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಗಳ ಆಯುಧಪೂಜೆ ವಿವರ ಹೀಗಿದೆ.
ಶರನ್ನವರಾತ್ರಿಯಲ್ಲಿ ಆಯುಧಪೂಜೆಗೆ ಅದರದ್ದೇ ಆದ ಮಹತ್ವವಿದೆ. ಅದೇ ಪರಂಪರೆಯನ್ನು ಯದು ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿಕೊಂಡು ಬಂದಿದ್ದು, ಬೆಳಗ್ಗೆ 6:00 ಗಂಟೆಗೆ ಧಾರ್ಮಿಕ ಕಾರ್ಯಗಳು ಆರಂಭವಾಗಲಿವೆ. ಬೆಳಗ್ಗೆ 6 ಗಂಟೆಗೆ ಚಂಡಿಹೋಮ ಆರಂಭವಾಗಿ 9 ಗಂಟೆಗೆ ಈ ಹೋಮ ಪೂರ್ಣವಾಗಲಿದೆ.
7.45 ಕ್ಕೆ ಆನೆಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಬರುತ್ತವೆ. ಅಲ್ಲಿಂದ ಬೆಳಗ್ಗೆ 8.10 ರಿಂದ 8.20 ವರೆಗೆ ರಾಜರ ಖಾಸಗಿ ಆಯುಧಗಳನ್ನು ಶ್ರೀ ಕೋಡಿಸೋಮೇಶ್ವರ ದೇವಾಲಯದ ಬಳಿ ತೆಗೆದುಕೊಂಡು ಹೋಗಲಾಗುತ್ತದೆ. ನಂತರ 9.25 ರಿಂದ 9.40 ರ ಸುಮಾರಿಗೆ ಕೋಡಿ ಸೋಮೇಶ್ವರ ದೇವಾಲಯ ಬಳಿ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಿ ಪುನಃ ಕಲ್ಯಾಣ ಮಂಟಪಕ್ಕೆ ಖಾಸಗಿ ಆಯುಧಗಳನ್ನು ತರಲಾಗುತ್ತದೆ.
ಅದ್ದೂರಿ ಕಾರ್ಗಳಿಗೆ ಪೂಜೆ: ಕಲ್ಯಾಣ ಮಂಟಪದಲ್ಲಿ ರಾಜರ ಖಾಸಗಿ ಆಯುಧಗಳಾದ ಕತ್ತಿ ಸೇರಿದಂತೆ ಇತರ ಆಯುಧಗಳನ್ನು ಜೋಡಿಸಿ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆಯನ್ನು ಆರಂಭಿಸುತ್ತಾರೆ. 10.30 ರ ಸುಮಾರಿಗೆ ಮತ್ತೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಬರಲಾಗುತ್ತದೆ. ಆನಂತರ ಆನೆ ಬಾಗಿಲಿನ ಮೂಲಕ ಕಲ್ಯಾಣ ಮಂಟಪದ ಒಳಗೆ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ ರಾಜ ವಂಶಸ್ಥರು ಪಟ್ಟದ ಆನೆ, ಹಸು, ಕುದುರೆ, ಒಂಟೆ, ಪಲ್ಲಕ್ಕಿ ಹಾಗೂ ಅವರು ಬಳಸುವ ಅದ್ದೂರಿ ಕಾರ್ಗಳಿಗೆ ಪೂಜೆ ಸಲ್ಲಿಸುತ್ತಾರೆ.
ಅರಮನೆ ಒಳಗೆ ವಿಶೇಷ ಪೂಜೆ: ಸಮಯ 11.02 ನಿಮಿಷದಿಂದ 11.25 ವರೆಗೆ ಆಯುಧಪೂಜೆ ನೆರವೇರುತ್ತದೆ. ಸಂಜೆ ರಾಜ ವಂಶಸ್ಥರು ರತ್ನಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್ ನಡೆಸಿ ಸಿಂಹಾಸನದಿಂದ ಸಿಂಹವನ್ನು ವಿಸರ್ಜನೆ ಮಾಡುತ್ತಾರೆ. ಅನಂತರ ಕಂಕಣ ವಿಸರ್ಜನೆ ಮಾಡಲು ರಾಜ ವಂಶಸ್ಥರು ದೇವರ ಮನೆಗೆ ಬರುವ ಅವರು ರಾತ್ರಿ ಸಂಪ್ರದಾಯದ ರೀತಿಯಲ್ಲಿ ಅರಮನೆ ಒಳಗಿನ ದೇವರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ರೀತಿ ಆಯುಧ ಪೂಜೆ ರಾಜ ವಂಶಸ್ಥರ ಪರಂಪರೆಯಂತೆ ಶುಭ ಗಳಿಗೆಯಲ್ಲಿ ನೆರವೇರುತ್ತದೆ.