ಮೈಸೂರು: ನವರಾತ್ರಿಯ ನವಮಿಯ ದಿನವಾದ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಬೆಳಗ್ಗಿನಿಂದಲೇ ಆಯುಧ ಪೂಜೆಯ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿವೆ.
ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜಾ ಕಾರ್ಯಗಳು ಬೆಳಗ್ಗಿನಿಂದಲೇ ಆರಂಭವಾಗಿವೆ. ಬೆಳಗ್ಗೆ 5:30ಕ್ಕೆ ಅರಮನೆ ಒಳಗಡೆ ಚಂಡಿಕಾ ಹೋಮ ನೆರವೇರುತ್ತಿದೆ. ಬೆಳಗ್ಗೆ 5:20 ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಿದ್ದು, ಬೆಳಗ್ಗೆ 6:05 ರಿಂದ 6:15 ಕ್ಕೆ ಖಾಸಾ ಆಯುಧಗಳನ್ನು ಅರಮನೆಯ ಕೋಡಿ ಸೋಮೇಶ್ವರ ದೇವಾಲಯಕ್ಕೆ ತಂದು ಸ್ವಚ್ಛಗೊಳಿಸಿ, ಪುನಃ 07:15ಕ್ಕೆ ಖಾಶಾ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಗೆ ವಾಪಸ್ ತರಲಾಗುತ್ತದೆ.
ಅಲ್ಲಿ ಆಯುಧ ಪೂಜೆಗಾಗಿ ಜೋಡಿಸಿ ಇಡಲಾಗುತ್ತದೆ. ಬಳಿಕ 9:30 ಕ್ಕೆ ಚಂಡಿಕಾ ಹೋಮ ಪೂರ್ಣಾಹುತಿಯಾಗಿದ್ದು, ಬೆಳಗ್ಗೆ 11:45 ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ, ಕುದುರೆ, ಪಟ್ಟದ ಹಸು ಹಾಗೂ ಮಹಾರಾಜರು ಸಾಕಿರುವ ಹೆಣ್ಣಾನೆಗಳು ಆಗಮಿಸಲಿವೆ. 12:20 ಕ್ಕೆ ಆಯುಧ ಪೂಜೆ ಆರಂಭವಾಗಲಿದ್ದು, 12:45 ರವರೆಗೆ ಯದುವೀರ್ ಒಡೆಯರ್ ಆಯುಧ ಪೂಜೆ ನೆರವೇರಿಸಲಿದ್ದಾರೆ.
ಬಳಿಕ ಆಯುಧ ಪೂಜೆಯ ಕೊನೆಯಲ್ಲಿ ತಾವು ಬಳಸುವ ವಾಹನಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ನವರಾತ್ರಿಯ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡುತ್ತಾರೆ. ಆ ಬಳಿಕ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡುತ್ತಾರೆ... ಹೀಗೆ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರುತ್ತದೆ.
ಇದನ್ನೂ ಓದಿ: ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜವಂಶಸ್ಥ ಯಧುವೀರ್ ಒಡೆಯರ್ ಹೇಳಿದ್ದೇನು?.. ಅವರ ಮಾತಲ್ಲೇ ಕೇಳಿ!
ಮಂಗಳವಾರ ಜಂಬೂ ಸವಾರಿ: ದಸರಾದ ಆಕರ್ಷಕ ಮತ್ತು ಪ್ರಮುಖ ಕಾರ್ಯಕ್ರಮವಾಗಿರುವ ಜಂಬೂ ಸವಾರಿ ಮಂಗಳವಾರ ನಡೆಯಲಿದೆ. ಅರಮನೆ ಆವರಣದಲ್ಲಿರುವ ಬಲರಾಮ ದ್ವಾರದಲ್ಲಿ ನಾಳೆ ಮಧ್ಯಾಹ್ನ 1.46ಕ್ಕೆ ನಂದಿಧ್ವಜ ಪೂಜೆ ನೆರವೇರಿದ ಬಳಿಕ ಸಂಜೆ 4.40ಕ್ಕೆ ವಿಜಯದಶಮಿ ಮೆರವಣಿಗೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ವೇಲೆ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲಿದ್ದಾರೆ. ರಾತ್ರಿ 7.30ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು(ಟಾರ್ಚ್ ಲೈಟ್ ಪೆರೇಡ್) ನಡೆಯಲಿದೆ.