ಮೈಸೂರು: ರಾಮ ರಾಜ್ಯದ ಕನಸನ್ನು ನನಸು ಮಾಡುವುದರಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ನರೇಂದ್ರ ಮೋದಿಯವರು ನಾಳಿನ (ಆ.5) ಕಾರ್ಯಕ್ರಮವನ್ನು ನೆರವೇರಿಸುತ್ತಿರುವುದು ಯೋಗವೆಂದು ಭಾವಿಸುತ್ತೇವೆ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಹೇಳಿದ್ದಾರೆ.
ಶ್ರಾವಣ ಮಾಸದ ಶುಭ ದಿನದಂದು ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ನಡೆಯುತ್ತಿರುವುದು ಸಂತೋಷದ, ಮಹತ್ವದ ಸಂಗತಿಯಾಗಿದೆ. ಶ್ರೀ ರಾಮ ಈ ದೇಶದ ಮಹಾ ಪುರುಷನಾಗಿ, ಸಂಸ್ಕೃತದ ಉತ್ತರಾಧಿಕಾರಿಯಾಗಿ ಇದ್ದವರು. ಅವರ ಜನ್ಮಸ್ಥಳದಲ್ಲಿ ಅವರ ಸ್ಮರಣೆಗಾಗಿ ನಡೆಯುತ್ತಿರುವ ಕಾರ್ಯಕ್ರಮ ಈ ದೇಶದ ಸಮಸ್ತ ಜನರ ಆಶಯವಾಗಿತ್ತು ಎಂದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನಿಂದಾಗಿ ಸಂತೋಷ ಸಂಭ್ರಮಗಳು ಇವೆ. ಇಡೀ ದೇಶದ ಜನ ಸಂತೋಷದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂತರು, ಲಕ್ಷಾಂತರ ಭಕ್ತರ ಜೊತೆ ನಾವು ಭಾಗವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ನೇರವಾಗಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪತ್ರಿಯೊಬ್ಬರು ಎಲ್ಲೆಲ್ಲಿ ಇದ್ದೀರಾ ಅಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸುವ ಅವಕಾಶವಿದೆ. ಇನ್ನೂ ರಾಮಮಂದಿರ ಎರಡು, ಮೂರು ವರ್ಷಗಳಲ್ಲಿ ಸಂಪೂರ್ಣಗೊಂಡು ಐತಿಹಾಸಿಕ, ಸಾಂಸ್ಕೃತಿಕ ಕೇಂದ್ರವಾಗಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ ಎಂದು ಹೇಳಿದರು.