ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ್ದ ಫರಾನ್ಗೆ ಬಾಲಿವುಡ್ ಸಿನಿಮಾ ಪ್ರೇರಣೆಯಾಗಿತ್ತು ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಸಮೀಪ ಇರುವ ಕಲ್ಯಾಣಮಂಪಟದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಭಾನುವಾರ ಶಾಸಕ ತನ್ವೀರ್ ಸೇಠ್ ಭಾಗಿಯಾಗಿದ್ರು. ಈ ವೇಳೆ ಆರೋಪಿ ಅವರ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಬಳಿಕ ಪೊಲೀಸರು ಬಂಧಿಸಿದ್ದರು.
ಇನ್ನು, ಆರೋಪಿ ಫರಾನ್ ಪಾಷಾ ಶಾಸಕ ತನ್ವೀರ್ ಸೇಠ್ ಅವರ ಹತ್ಯೆಗೆ ಯತ್ನ ಮಾಡುವ ಮುನ್ನ ಶನಿವಾರ ರಾತ್ರಿ ನಟ ಸಂಜಯ್ ದತ್ ನಟನೆಯ ಗ್ಯಾಂಗ್‌ಸ್ಟಾರ್, ವಾಸ್ತವ್ ಸಿನಿಮಾವನ್ನು ಐದು ಬಾರಿ ನೋಡಿದ್ದ ಎಂದು ತಿಳಿದು ಬಂದಿದೆ. ಇದರಿಂದ ನಾನು ಪ್ರೇರಣೆಯಾಗಿದ್ದೇನೆ ಎಂದು ಫರಾನ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದನಂತೆ. ಈ ವಿಷಯವನ್ನು ಆತನ ಸ್ನೇಹಿತರು ಪೊಲೀಸರಿಗೆ ಹೇಳಿದ್ದಾರೆ.
![Attack on Tanveer Seth](https://etvbharatimages.akamaized.net/etvbharat/prod-images/5115765_mys.jpg)
ಇತ್ತ ಫರಾನ್ ಪೊಲೀಸರಿಗೆ ಸಿಕ್ಕಿ ಬೀಳುತ್ತಿದ್ದಂತೆ ಗೌಸಿಯಾನಗರದಲ್ಲಿದ್ದ ಈತನ ಕುಟುಂಬದವರು ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ಆರೋಪಿ ಫರಾನ್ನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ. ಮನವಿಯನ್ನು ಪುರಸ್ಕರಿಸಿದ ಮೈಸೂರು ಜೆಎಂಎಫ್‍ಸಿ ನ್ಯಾಯಾಧೀಶರು ಆರೋಪಿ ಫರಾನ್ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಇದೀಗ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಫರಾನ್ ಬ್ರೈನ್ ವಾಶ್ ಮಾಡಿದವರಿಗೆ ಹಾಗೂ ಗ್ಯಾಂಗ್ ಮೇಲೆ ನಾಕಬಂಧಿ ರಚಿಸಿದ್ದಾರೆ. ಒಬ್ಬೊಬ್ಬರಾಗಿ ಕರೆತಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.