ಮೈಸೂರು : ಇಂದು ಎರಡನೇ ಆಷಾಢ ಶುಕ್ರವಾರವಾದ ಪ್ರಯುಕ್ತ ನಾಡ ಅಧಿದೇವತೆ ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದಲೇ ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಆಷಾಢ ಶುಕ್ರವಾರದ ನಿಮಿತ್ತ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರು ಅನುಕೂಲಕ್ಕಾಗಿ ನಗರದ ಲಲಿತ ಮಹಲ್ ಮೈದಾನದಿಂದ ಚಾಮುಂಡಿ ಬೆಟ್ಟಕ್ಕೆ ಬೆಳಗ್ಗೆ 5 ಗಂಟೆಯಿಂದಲೇ ಉಚಿತ ಬಸ್ ಸೇವೆ ಒದಗಿಸಲಾಗಿದ್ದು, ರಾತ್ರಿ 8.30 ರವರೆಗೆ ಉಚಿತ ಬಸ್ ಸೇವೆ ಇರಲಿದೆ. ಜೊತೆಗೆ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಡಿಸಿಪಿ ನೇತೃತ್ವದಲ್ಲಿ ಹೆಚ್ಚಿನ ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸಂಚಾರಿ ಪೊಲೀಸರು ಸಂಚಾರಿ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.
ಇದನ್ನೂ ಓದಿ : ಆಷಾಢ ಶುಕ್ರವಾರ : ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಯ ದರ್ಶನ ಪಡೆದ ನಟ ದರ್ಶನ್ - ವಿಡಿಯೋ
ಸಿಂಹವಾಹಿನಿ ಅಲಂಕಾರದಲ್ಲಿ ನಾಡ ಅಧಿದೇವತೆ : ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆ ಮೂಲ ಚಾಮುಂಡೇಶ್ವರಿ ತಾಯಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿದೆ. ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಬೆಳಗಿನ ಜಾವ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಆರಂಭವಾಗಿವೆ. ಬೆಳಗ್ಗೆ 3 ಗಂಟೆಗೆ ಚಾಮುಂಡೇಶ್ವರಿ ತಾಯಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ನಂತರ ಮಹಾ ಮಂಗಳಾರತಿ ನೆರವೇರಿದೆ. ಬೆಳಗಿನ ಜಾವ 5.30 ಕ್ಕೆ ತಾಯಿಯ ದರ್ಶನವನ್ನು ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ರಾತ್ರಿ 9.30 ರವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ರಾಜ್ಯದ ಪ್ರಮುಖ ದೇವಾಲಯಗಳು ಯಾವುವು ಗೊತ್ತೇ ?
ಇನ್ನು ಈ ಬಾರಿ ಪಾಸ್ ವ್ಯವಸ್ಥೆ ಇಲ್ಲದ ಕಾರಣ 300 ರೂಪಾಯಿ ಹಾಗೂ 50 ರೂಪಾಯಿ ಟಿಕೆಟ್ ಪಡೆದು ವಿಶೇಷ ದರ್ಶನ ಪಡೆಯಬಹುದಾಗಿದ್ದು, 50 ರೂಪಾಯಿ ಟಿಕೆಟ್ ಪಡೆದು ದರ್ಶನ ಮಾಡುವ ಸ್ಥಳದಲ್ಲಿ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಮೆಟ್ಟಿಲುಗಳ ಮೂಲಕವೂ ಸಹ ಚಾಮುಂಡಿ ತಾಯಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿರುವುದು ವಿಶೇಷ.
ಇದನ್ನೂ ಓದಿ : ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಪ್ರಸಾದ್ ಯೋಜನೆ : ಚಾಮುಂಡಿ ಬೆಟ್ಟ ಅಭಿವೃದ್ಧಿಗೆ 45.70 ಕೋಟಿ ಅನುದಾನಕ್ಕೆ ಒಪ್ಪಿಗೆ