ಮೈಸೂರು: ಆಷಾಢ ಶುಕ್ರವಾರ ಆಚರಣೆ ವಿಶೇಷವಾಗಿ ನಾಲ್ಕು ಶುಕ್ರವಾರ ಹಾಗೂ ಚಾಮುಂಡೇಶ್ವರಿಯ ವರ್ಧಂತಿ ಉತ್ಸವ ಇರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ, ಜೊತೆಗೆ ವಿಐಪಿಗಳು ಪ್ರತ್ಯೇಕವಾಗಿ ಬಂದು ತಾಯಿಯ ದರ್ಶನ ಪಡೆದು ಹೋಗುತ್ತಾರೆ ಎಂದು ಸಭೆಯ ನಂತರ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಆರ್ಚಕ ಶಶಿಶೇಖರ್ ದೀಕ್ಷಿತ್ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಆಚರಿಸಲ್ಪಡುವ ಆಷಾಢ ಶುಕ್ರವಾರದ ಬಗ್ಗೆ ಮಾಹಿತಿ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಚಾಮುಂಡಿ ಬೆಟ್ಟದ ಪ್ರಧಾನ ಆರ್ಚಕ ಶಶಿಶೇಖರ್ ದೀಕ್ಷಿತ್, ಆಷಾಢ ಮಾಸ ಎಂಬುದು ಒಂದು ವಿಶೇಷವಾದ ಮಾಸವಾಗಿದ್ದು, ಈ ಮಾಸದಲ್ಲಿ ಯಾವುದೇ ಶುಭ ಸಮಾರಂಭಗಳು ಇಲ್ಲದೇ ಇರುವುದರಿಂದ ಎಲ್ಲರೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ತಾಯಿಯ ದರ್ಶನ ಪಡೆಯುತ್ತಾರೆ. ಆಷಾಢ ಮಾಸದಲ್ಲಿ ಶಕ್ತಿ ದೇವತೆಯ ದರ್ಶನ ಪಡೆದರೆ ಇಷ್ಟಾರ್ಥ ಸಿದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ಚಾಮುಂಡಿ ಬೆಟ್ಟದಲ್ಲಿ ರಾಜ ಮಹಾರಾಜರ ಕಾಲದಿಂದಲೂ ಆಷಾಢ ಮಾಸದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ. ಅದನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಭಕ್ತರು ಈ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುವುದು ವಿಶೇಷ.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ: ಚಾಮುಂಡಿ ಬೆಟ್ಟದಲ್ಲಿ ನಡೆಯುವ ಆಷಾಢ ಶುಕ್ರವಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ. ಮಹಾದೇವಪ್ಪ ನೇತೃತ್ವದಲ್ಲಿ, ಸರ್ಕಾರಿ ಅತಿಥಿ ಗೃಹದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಚಿವರು ಮಾತನಾಡಿ, ಯಾವುದೇ ರೀತಿಯ ತೊಂದರೆ ಆಗದಂತೆ ಆಷಾಡ ಶುಕ್ರವಾರವನ್ನು ಆಚರಿಸುವಂತೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಈ ಸಭೆಯಲ್ಲಿ ಭಾಗವಹಿಸಿದ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಸಭೆಯಲ್ಲಿ ನಡೆದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಶ್ರದ್ಧಾ ಭಕ್ತಿಗಳಿಂದ ಆಷಾಢ ಶುಕ್ರವಾರವನ್ನು ಆಚರಿಸಲು ತೀರ್ಮಾನ ಮಾಡಲಾಯಿತು.
ನಾಲ್ಕು ಆಷಾಢ ಹಾಗೂ ವರ್ಧಂತಿಗೆ ವಿಶೇಷ ಪೂಜೆ: ಜೊತೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಬೇಕಾದ ಎಲ್ಲಾ ರೀತಿಯ ಏರ್ಪಾಟುಗಳನ್ನ ಮಾಡಲು ಸೂಚನೆ ನೀಡಲಾಗಿದ್ದು, ದರ್ಶನಕ್ಕೆ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ. ವಿಐಪಿಗಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದ್ದು, ಇದೇ ತಿಂಗಳ 23ನೇ ತಾರೀಖು ಮೊದಲ ಆಷಾಢ ಶುಕ್ರವಾರ, ಜುಲೈ 10ರಂದು ಚಾಮುಂಡೇಶ್ವರಿ ವರ್ಧಂತಿಯೂ ಸಹ ಇರುತ್ತದೆ. ಒಟ್ಟು ನಾಲ್ಕು ಶುಕ್ರವಾರ ಮತ್ತು ವರ್ಧಂತಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಎಂದು ಪ್ರಧಾನ ಆರ್ಚಕರಾದ ಶಶಿಶೇಖರ್ ದೀಕ್ಷಿತ್ ಮಾಧ್ಯಮಗಳಿಗೆ ವಿವರಿಸಿದರು.
ಇದನ್ನೂ ಓದಿ: D K Shivakumar: ಉಜ್ಜಯಿನಿ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್- ವಿಡಿಯೋ