ಮೈಸೂರು: ಇಂದು ಎರಡನೇ ಆಷಾಢ ಶುಕ್ರವಾರ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಈ ಬಾರಿಯೂ ದೇವಿಗೆ ಮೊದಲ ಪೂಜೆ ಯದುವೀರ್ ದಂಪತಿ ನೆರವೇರಿಸಿದರು.
ಎರಡನೇ ಆಷಾಢ ಶುಕ್ರವಾರ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಬೆಳಗ್ಗೆ 5 ಗಂಟೆಯಿಂದಲೇ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯೇ ಗರ್ಭಗುಡಿಯನ್ನು ಸ್ವಚ್ಛಗೊಳಿಸಿ ರುಧ್ರಾಭಿಷೇಕ, ಪಂಚಾಭಿಷೇಕ ನೇರವೇರಿಸಲಾಗಿದ್ದು, ಚಾಮುಂಡೇಶ್ವರಿಯ ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗೆ ದೇವಿ ನಾಗಲಕ್ಷ್ಮಿ ಅಲಂಕಾರ ಹಾಗೂ ಕೆಂಪು ಸೀರೆಯನ್ನು ಉಟ್ಟ ವಿಶೇಷ ಲಕ್ಷ್ಮೀ ಅಲಂಕಾರ ಮಾಡಿ ಪೂಜೆ ಮಾಡಿರೋದು ವಿಶೇಷವಾಗಿತ್ತು. ಸಚಿವ ಹೆಚ್.ಡಿ ರೇವಣ್ಣ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸರ್ಕಾರ ಉಳಿಯಲಿ ಎಂದು ಪ್ರಾರ್ಥಿಸಿದರು.
ಜನ ದಟ್ಟಣೆಯ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾಲಿನಲ್ಲಿ ಭಕ್ತರು ತೆರಳಿ ದರ್ಶನ ಪಡೆಯಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಗಣ್ಯ ವ್ಯಕ್ತಿಗಳು ಆಗಮಿಸುವ ಸಂದರ್ಭದಲ್ಲಿ ಅವರಿಗೆ ವಿಶೇಷ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ.