ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಗನ್ಮ್ಯಾನ್ ಕುಟುಂಬಕ್ಕೆ ಸೇರಿದ ತೋಟದಲ್ಲಿನ ಸುಮಾರು 200 ಅಡಕೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದ ಮಾವಳಿಗೌಡರ ತೋಟದಲ್ಲಿ 800 ಅಡಕೆ ಮರಗಳು ಫಸಲು ಬಿಡುವ ಹಂತಕ್ಕೆ ಬಂದಿವೆ. ಯಾರೋ ಕಿಡಿಗೇಡಿಗಳು ಶನಿವಾರ ರಾತ್ರಿ ತೋಟದ ಒಂದು ಭಾಗದ ಸುಮಾರು 200 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಭಾನುವಾರ ತೋಟಕ್ಕೆ ನೀರು ಹಾಯಿಸಲು ಬಂದ ತೋಟದ ಮಾಲೀಕ ಮಾವಳಿಗೌಡರು ಇದನ್ನು ನೋಡಿದ್ದು, ತಕ್ಷಣ ತಮ್ಮ ಮಗ ವಿನಯ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ವಿನಯ್ ಜಿಲ್ಲಾ ಕಂಟ್ರೋಲ್ ರೂಂಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಅಡಕೆ ಗಿಡಗಳನ್ನು ಕಡಿದು ಹಾಕಿರುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದನ್ನು ಕಂಡು ಹಿಡಿಯಲು ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ. ಹಳೆ ವೈಷಮ್ಯದಿಂದ ಕಿಡಿಗೇಡಿಗಳು ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Gulab Cyclone: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ..ಯೆಲ್ಲೋ ಅಲರ್ಟ್ !