ಮೈಸೂರು: ಗೋಹತ್ಯೆ ನಿಷೇಧಿಸಿ ಹಿಂದಿನ ಬಿಜೆಪಿ ಸರ್ಕಾರ ಕಾನೂನು ಜಾರಿಗೆ ತಂದಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಈ ಕಾನೂನು ರದ್ದುಗೊಳಿಸುವ ನಿರ್ಧಾರ ಮಾಡಿದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ. ಏಕೆಂದರೆ, ಈ ಬಾರಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ನ ನಾಯಕರು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾನೂನುಗಳನ್ನು ಪುನರ್ ಪರಿಶೀಲಿಸುವ ಮಾತುಗಳನ್ನಾಡುತ್ತಿದ್ದಾರೆ. ಇದೀಗ ನೂತನ ಪಶು ಸಂಗೋಪನ ಸಚಿವರು ಸಹ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ.
"ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು?" ಎಂದು ಪಶು ಸಂಗೋಪನ ಸಚಿವ ಕೆ ವೆಂಕಟೇಶ್ ಅವರು ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ತಮ್ಮ ಮನೆಯಲ್ಲಿ ತಮಗಾದ ಅನುಭವ ತಿಳಿಸಿದ ಸಚಿವರು.. ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ, ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. 25 ಮಂದಿ ಬಂದರೂ ಸಾವನ್ನಪ್ಪಿದ ಆ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವನ್ನು ಎತ್ತಿಸಿ ಗುಂಡಿ ತೋಡಿ ಹೂಳಬೇಕಾಯಿತು. ಇದು ತಮಗಾದ ಅನುಭವ ಎಂದು ಸಚಿವರು ಹೇಳಿದರು. ಹಸು ದತ್ತು ಯೋಜನೆ ಏನಾಗಿದೆ ಎಂದು ಪರಿಶೀಲಿಸುತ್ತೇವೆ, ಗೋ ಶಾಲೆಗಳ ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ. ಆದರೆ ನಿರ್ವಹಣೆ ಸರಿಯಾಗಿ ಆಗಿಲ್ಲ. ಮುಂದೆ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಪಶು ಸಂಗೋಪನ ಸಚಿವ ಕೆ ವೆಂಕಟೇಶ್ ಹೇಳಿದರು.
ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ: ಇನ್ನು ಅಮುಲ್ ಉತ್ಪನ್ನಗಳ ಬಗ್ಗೆ ಮಾತನಾಡಿದ ಸಚಿವರು, ರಾಜ್ಯಕ್ಕೆ ಅಮುಲ್ ಬಂದಿಲ್ಲ, ಅಮುಲ್ನಿಂದ ನಂದಿನಿಗೆ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಅಮುಲ್ ಬಂದಾಗ ನೋಡೋಣ, ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾನೂನಿನಲ್ಲಿ ಏನಿದೆ.. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಜೆ ಸಿ ಮಾಧುಸ್ವಾಮಿ ಅವರು 2020 ರ ಡಿಸೆಂಬರ್ ತಿಂಗಳಿನಲ್ಲಿ ಗೋಹತ್ಯೆ ನಿಷೇಧ ಕಾನೂನು ಕುರಿತು ಸ್ಪಷ್ಟನೆ ನೀಡಿದ್ದರು. 1964 ಗೋ ಹತ್ಯೆ ಕಾನೂನನ್ನೇ ಇನ್ನಷ್ಟು ಕಠಿಣ ರೂಪದಲ್ಲಿ ಜಾರಿಗೆ ತಂದಿದ್ದೇವೆಯೇ ಹೊರತು, ಅದರಲ್ಲಿ ಹೊಸತೇನೂ ಇಲ್ಲ ಎಂದು ತಿಳಿಸಿದ್ದರು. ಅಲ್ಲದೆ, ವಯಸ್ಸಾದ ಹಸುಗಳನ್ನು ವಧೆ ಮಾಡಲು ಹಿಂದಿನ ಕಾನೂನಿನಲ್ಲಿ ಅವಕಾಶ ಇತ್ತು. ಆದ್ರೆ ನಾವು ಅದನ್ನು ಬದಲಾಯಿಸಿದ್ದೇವೆ. ಎಮ್ಮೆಯನ್ನು ಮಾತ್ರ 13 ವರ್ಷ ವಯಸ್ಸು ಮೀರಿದ ಮೇಲೆ ವಧೆ ಮಾಡಲು ಅವಕಾಶ ನೀಡಿದ್ದೇವೆ ಎಂದಿದ್ದರು.
ಇದನ್ನೂ ಓದಿ: ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರ ಟೋಪಿ ಹಾಕುತ್ತಿದೆ: ಸಂಸದ ಪ್ರತಾಪ್ ಸಿಂಹ