ಮೈಸೂರು: ಅಂಗಾಂಗ ದಾನ ಮಾಡುವ ಮೂಲಕ ಅನಿಲ್ ಅವರು ಸಾವಿನ ನಂತರವೂ, ಐವರ ಪ್ರಾಣ ಉಳಿಸಿದ್ದಾರೆ. ಹೌದು, ಅನಿಲ್ ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಯಕೃತ್ತು, ಎರಡು ಮೂತ್ರಪಿಂಡಗಳು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಅವರ ಸಂಬಂಧಿಕರ ನೆರವಿನಿಂದ ಮೃತರ ಅಂಗಾಂಗಗಳನ್ನು ದಾನ ಮಾಡಲಾಯಿತು.
ಅಪಘಾತದಲ್ಲಿ ಅನಿಲ್‌ಕುಮಾರ್ ತಲೆಗೆ ಗಂಭೀರ ಗಾಯ: ಎಚ್.ಡಿ. ಕೋಟೆ ರಸ್ತೆಯ ಪರಸಯ್ಯನಹುಂಡಿಯಲ್ಲಿ ನಡೆದ ಅಪಘಾತದಲ್ಲಿ ಎಂ.ಅನಿಲ್‌ಕುಮಾರ್(38) ತಲೆಗೆ ಗಂಭೀರ ಗಾಯವಾದ ಕಾರಣ, ಕಾಮಾಕ್ಷಿ ಆಸ್ಪತ್ರೆಯಿಂದ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಮಾ.14 ರಂದು ಕರೆತರಲಾಯಿತು. ಆರಂಭಿಕ ಸಿಟಿ ಸ್ಕ್ಯಾನ್‌ನಿಂದ ಅವರ ಮೆದುಳಿನಲ್ಲಿ ಊದಿಕೊಂಡಿರುವುದು ಪತ್ತೆಯಾಯಿತು. ತಕ್ಷಣ ಅವರನ್ನು ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತು.
ಮಾನವ ಅಂಗಾಂಗ ಕಸಿ ಕಾಯ್ದೆ: ಅನಿಲ್ ಕುಮಾರ್ ಅವರನ್ನು ಐಸಿಯುನಲ್ಲಿ ಇರಿಸಲಾಯಿತು. ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಮಾ.17 ರಂದು ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಶಿಷ್ಟಾಚಾರದ ಅನುಸಾರ, ಅಪೋಲೊ ಬಿಜಿಎಸ್ ಆಸ್ಪತ್ರೆ ಮೈಸೂರಿನಲ್ಲಿ ತಜ್ಞ ವೈದ್ಯರ ತಂಡವು ಪರಿಶೀಲಿಸಿ ಈ ಘೋಷಣೆ ಮಾಡಿತು.
ಈ ಘಟನೆಗೂ ಮುನ್ನ ಅನಿಲ್ ಅವರು ಆರೋಗ್ಯದಿಂದ ಇದ್ದರು. ಈ ಘಟನೆ ಬಳಿಕ, ಮತ್ತಷ್ಟು ಪರೀಕ್ಷೆಗಳ ಮೂಲಕ ಅವರ ಅಂಗಾಂಗಗಳು ದಾನಕ್ಕೆ ಯೋಗ್ಯವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಸಂಬಂಧಿಕರು ಮುಂದೆ ಬಂದರು.
ನಿಗದಿತ ಶಿಷ್ಟಾಚಾರದಂತೆ ಅಧಿಕಾರಿಗಳು (ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಅಂಗಾಂಗ ಕಸಿಗೆ ಕಾಯುತ್ತಿರುವ ರೋಗಿಗಳ ಪಟ್ಟಿ ಸಿದ್ಧಪಡಿಸಿದರು. ಶುಕ್ರವಾರ ಬೆಳಗ್ಗೆ 11.10 ವೇಳೆಗೆ ಅನಿಲ್ ಅವರ ಅಂಗಾಂಗಗಳನ್ನು (ಎರಡು ಮೂತ್ರಪಿಂಡ, ಯಕೃತ್ತು, ಮತ್ತು ಕಾರ್ನಿಯಾಗಳು) ಬೇರ್ಪಡಿಸಲಾಯಿತು.
ಅಂಗಾಂಗ ಕಸಿ ಪೂರ್ಣ: ಶನಿವಾರ ಬೆಳಗ್ಗೆ 10.37 ಹೊತ್ತಿಗೆ ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರಿನಲ್ಲಿ ಕ್ರಾಸ್ ಕ್ಲಾಂಪ್ ಪ್ರಕ್ರಿಯೆ ಮೂಲಕ ಅಂಗಾಂಗ ಕಸಿಯನ್ನು ಪೂರ್ಣಗೊಳಿಸಲಾಯಿತು. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಯಕೃತ್ತು ಹಾಗೂ ಬಲ ಮೂತ್ರಪಿಂಡ, ಜೆಎಸ್‌ಎಸ್ ಆಸ್ಪತ್ರೆಗೆ ಎಡ ಮೂತ್ರಪಿಂಡ, ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಹೃದಯ ಕವಾಟಗಳು, ಕೆ.ಆರ್. ಆಸ್ಪತ್ರೆಗೆ ಕಾರ್ನಿಯಾಗಳನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆ!: ಅಧ್ಯಯನ
ಈ ಹಿಂದೆಯೂ ಅಂಗಾಂಗ ದಾನ: ರಸ್ತೆ ಅಪಘಾತದಲ್ಲಿ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದ 27 ವರ್ಷದ ಮಣಿ ಎಂಬ ಯುವಕನ ಮೆದುಳು ನಿಷ್ಕ್ರಿಯ ಗೊಂಡಿತ್ತು, ಆಗ ಅಂಗಾಂಗ ದಾನ ಮಾಡುವ ಮೂಲಕ 6 ಜನರ ಜೀವ ಉಳಿಸಿದ ಮಣಿ, ಸಾವಿನಲ್ಲೂ ಸಾರ್ತಕತೆ ಮೆರೆದಿದ್ದರು. ಹೃದಯ, ಯಕೃತ್ತು, ಎರಡು ಮೂತ್ರಪಿಂಡಗಳು, ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು.
ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಣಿ ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಯನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಿಂದ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಮಾ.1 ರಂದು ಕರದೊಯ್ಯಲಾಗಿತ್ತು. ಅಲ್ಲಿ ಸಿಟಿ ಸ್ಕ್ಯಾನ್ ನಡೆಸಿದ ವೇಳೆ ಅವರ ಮೆದುಳಿನ ಕಾಂಡ ಊದಿಕೊಂಡಿರುವುದು ಪತ್ತೆಯಾಗಿತ್ತು. ತಕ್ಷಣ ಅವರನ್ನು ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು.
ಮಾ.2 ರಂದು ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಶಿಷ್ಟಾಚಾರದ ಅನುಸಾರ ಅಪೋಲೊ ಬಿಜಿಎಸ್ ಆಸ್ಪತ್ರೆ ಮೈಸೂರಿನಲ್ಲಿ ವೈದ್ಯರ ತಂಡವು ಪರಿಶೀಲಿಸಿ ಘೋಷಣೆ ಮಾಡಿತ್ತು. ಘಟನೆಗೂ ಮುನ್ನ ಮಣಿ ಅವರು ಆರೋಗ್ಯದಿಂದ ಇದ್ದರಾ ಎಂದು ಮತ್ತಷ್ಟು ಪರೀಕ್ಷೆಗಳ ಮೂಲಕ ಅವರ ಅಂಗಾಂಗಗಳು ದಾನಕ್ಕೆ ಯೋಗ್ಯವಾಗಿವೆ ಎಂಬುದನ್ನು ವೈದ್ಯರು ಖಚಿತಪಡಿಸಿಕೊಂಡಿದ್ದರು. ಬಳಿಕ ಮಣಿ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬದವರು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದರು.
ಇದನ್ನೂ ಓದಿ: ದೌಂಡ್ ಮನ್ಮಾಡ್ ಜೋಡಿ ಮಾರ್ಗದ ಕಾಮಗಾರಿ ಶುರು: ನೈರುತ್ಯ ರೈಲ್ವೆಯ ಕೆಲ ರೈಲು ರದ್ದು, ಕೆಲವು ಸಂಚಾರದಲ್ಲಿ ಬದಲಾವಣೆ