ಮೈಸೂರು: ಮೈಸೂರು ರೈಲು ವಸ್ತು ಸಂಗ್ರಹಾಲಯ ಆವರಣದಲ್ಲಿ ಡಿಜಿಟಲ್/ಡಿಎಸ್‌ಎಲ್‌ಆರ್ ಕ್ಯಾಮರಾ ಬಳಕೆಗೆ ಮತ್ತು ವಿಶೇಷ ಕಾರ್ಯಕ್ರಮಗಳ ಫೋಟೋ ಶೂಟ್ ನಡೆಸಲು ರೈಲ್ವೆ ಇಲಾಖೆ ಸಾರ್ವಜನಕರಿಗೆ ಅವಕಾಶ ಕಲ್ಪಿಸಿದೆ.
ಪುನರ್ ಅಭಿವೃದ್ಧಿಗೊಂಡ ಮೈಸೂರು ರೈಲ್ವೆ ಮ್ಯೂಸಿಯಂ ಅನ್ನು ಮಾರ್ಚ್ 2020 ರಿಂದ ಸಾರ್ವಜನಿಕರಿಗೆ ತೆರೆದ ನಂತರ ವಸ್ತು ಸಂಗ್ರಹಾಲಯದ ಆವರಣದಲ್ಲಿ ಫೋಟೋ ಶೂಟ್ಗೆ ಮತ್ತು ಡಿಜಿಟಲ್ ಕ್ಯಾಮರಾ ಬಳಸಲು ಅನುಮತಿ ನೀಡುವಂತೆ ಬೇಡಿಕೆ ಬರುತ್ತಿತ್ತು. ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಇಲಾಖೆ ಈ ತೀರ್ಮಾನ ತೆಗೆದುಕೊಂಡಿದೆ.

ಮ್ಯೂಸಿಯಂ ಒಳಗೆ ವಿಂಟೇಜ್ ಸ್ಟೀಮ್ ಲೋಕೋಮೋಟಿವ್, ಮರದ ತಪಾಸಣೆ ಕೋಚ್‌ಗಳು, ಅಮೂಲ್ಯವಾದ ರಾಯಲ್ ಸಲೂನ್‌ಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ. ಮ್ಯೂಸಿಯಂ ಆವರಣದೊಳಗೆ ಭೇಟಿ ನೀಡುವವರು ಕ್ಯಾಮರಾ ಬಳಸಲು ಅನುಮತಿ ಪಡೆದು, ಅಧಿಸೂಚಿತ ಶುಲ್ಕಗಳನ್ನು ಪಾವತಿಸಬೇಕು ಎಂದು ಮೈಸೂರು ವಿಭಾಗೀಯ ರೈಲ್ವೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
