ETV Bharat / state

ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ವೀಕ್ಷಣೆಗೆ ಅವಕಾಶ - Mysure throne news

ವಿಶ್ವ ವಿಖ್ಯಾತ ನಾಡಹಬ್ಬ ದಸರಾಕ್ಕೆ ದಿನ ಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ದಸರಾ ಸಿದ್ಧತೆ ಕಾರ್ಯಕ್ರಮಗಳು ಶುರುವಾಗಿವೆ. ಈ ನಡುವೆಯೇ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ರತ್ನ ಖಚಿತ ಸಿಂಹಾಸನವನ್ನು ವೀಕ್ಷಿಸಲು ಅವಕಾಶ ಮಾಡಿ ಕೊಡಲಾಗಿದೆ.

ಮೈಸೂರು ಸಿಂಹಾಸನ
ಮೈಸೂರು ಸಿಂಹಾಸನ
author img

By

Published : Sep 25, 2020, 4:04 PM IST

ಮೈಸೂರು: ಮೈಸೂರು ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸಿಹಿ ಸುದ್ದಿಯೊಂದು ದೊರೆತಿದ್ದು, ಅಪರೂಪದ ರತ್ನ ಖಚಿತ ಸಿಂಹಾಸನವನ್ನು ಅರಮನೆಯ ದರ್ಬಾರ್ ಹಾಲ್​​​​​​ನಲ್ಲಿ ಜೋಡಿಸಲಾಗಿದೆ. ವಿಶೇಷ ಅಂದ್ರೆ ಸಿಂಹಾಸನ ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ವಿಶ್ವ ವಿಖ್ಯಾತ ನಾಡಹಬ್ಬ ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ದಸರಾ ಸಿದ್ಧತೆ ಕಾರ್ಯಕ್ರಮಗಳು ಶುರುವಾಗಿವೆ. ಕಳೆದ ವಾರ ಸೆಪ್ಟೆಂಬರ್ 18 ರಂದು ಅರಮನೆಯ ನೆಲಮಾಳಿಗೆಯಿಂದ ಸಿಂಹಾಸನದ ಬಿಡಿ ಭಾಗಗಳನ್ನು ಹೊರತೆಗೆದು ದರ್ಬಾರ್ ಹಾಲ್​​ನಲ್ಲಿ ಜೋಡಿಸಿದ್ದು, ಈಗ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಸಿಂಹಾಸನ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಲಾಗಿದೆ.

ಅರಮನೆ ಪ್ರವೇಶ ಶುಲ್ಕದೊಂದಿಗೆ ಹೆಚ್ಚುವರಿಯಾಗಿ 50 ರೂಪಾಯಿ ಪಾವತಿಸಿದರೆ ಸಿಂಹಾಸನ ವೀಕ್ಷಣೆ ಮಾಡಬಹುದು. ಬೆಳಗ್ಗೆ 9.30 ಯಿಂದ ಸಂಜೆ 5.30 ವರೆಗೆ ಸಿಂಹಾಸನ ವೀಕ್ಷಿಸಲು ಅವಕಾಶ ಇರುತ್ತದೆ.

ಒಂದು ತಿಂಗಳು ವೀಕ್ಷಣೆಗೆ ಅವಕಾಶ:

ಅರಮನೆ ವೀಕ್ಷಿಸಲು ಬರುವ ಮಕ್ಕಳಿಗೆ 35 ರೂಪಾಯಿ, ವಯಸ್ಕರಿಗೆ 70 ರೂಪಾಯಿ ದರವಿದ್ದು , ಸಿಂಹಾಸನ ವೀಕ್ಷಣೆಗೆ ಹೆಚ್ಚುವರಿ 50 ರೂಪಾಯಿ ಪಾವತಿಸಬೇಕು. ಕೈಗೆ ಬ್ಯಾಂಡ್ ಕಟ್ಟಿ ಸಿಂಹಾಸನ ವೀಕ್ಷಣೆ ಮಾಡಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಸಿಂಹಾಸನದ ಚಿತ್ರ ತೆಗೆಯಲು ನಿರ್ಬಂಧ ವಿಧಿಸಲಾಗಿದ್ದು, ಕೇವಲ ನೋಡುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಫೋಟೋ, ವಿಡಿಯೋಗೆ ನಿರ್ಬಂಧ ಹೇರಲಾಗಿದೆ. ಹಾಗೂ ಈ ವರ್ಷ ಅಧಿಕ ಮಾಸ ಇರುವುದರಿಂದ ನವರಾತ್ರಿ ಆರಂಭಕ್ಕೂ ಒಂದು ತಿಂಗಳ ಮುನ್ನವೇ ದರ್ಬಾರ್ ಹಾಲ್ ನಲ್ಲಿ ಸಿಂಹಾಸನ ಜೋಡಣೆ ಮಾಡಲಾಗಿದೆ‌.

ಅಕ್ಟೋಬರ್ 17 ರಂದು ನವರಾತ್ರಿ ಆರಂಭವಾಗಲಿದ್ದು, ಅಂದು ಬೆಳಗ್ಗೆ ಮತ್ತು ಸಂಜೆ 2 ಬಾರಿ ಖಾಸಗಿ ದರ್ಬಾರ್ ನಡೆಯಲಿದೆ. ಹಾಗಾಗಿ ಅಂದು ಸಿಂಹಾಸನ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಜಂಬೂಸವಾರಿ ಮುಗಿದ ನಂತರ 1 ವಾರಗಳ ಕಾಲ ಸಿಂಹಾಸನ ವೀಕ್ಷಣೆಗೆ ಅವಕಾಶವಿದ್ದು, ಆನಂತರ ಸಿಂಹಾಸನವನ್ನು ಬಿಡಿ ಭಾಗಗಳಾಗಿ ವಿಂಗಡಿಸಿ ಅರಮನೆಯ ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿಡಲಾಗುತ್ತದೆ.

ಕೋವಿಡ್ ಹಿನ್ನೆಲೆಯಲ್ಲಿ ಅರಮನೆಗೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ದಿನಕ್ಕೆ 500 ರಿಂದ 600 ಮಂದಿಯಷ್ಟೇ ಸಿಂಹಾಸನ ವೀಕ್ಷಣೆ ಮಾಡಲು ಬರುತ್ತಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.